ಸ್ಯಾನ್ ಫ್ರಾನ್ಸಿಸ್ಕೋ: ತಂತ್ರಜ್ಞಾನ ಉದ್ಯಮದ ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟರ್ ಕಟ್ಟಡದಲ್ಲಿನ ಲೋಗೊಗಳು ಮತ್ತು ವಸ್ತುಗಳನ್ನು ಹರಾಜಿಗೆ ಇಟ್ಟಿದ್ದಾರೆ. ಟ್ವಿಟರ್ಗೆ ಎಕ್ಸ್ ಎಂದು ಮರುನಾಮಕರಣ ಮಾಡಿದ ಕೆಲವೇ ವಾರಗಳ ನಂತರ ಮಸ್ಕ್ ಟ್ವಿಟರ್ ಹೆಸರು ಲೋಗೊ ಇರುವ ಎಲ್ಲ ವಸ್ತುಗಳನ್ನು ಕಚೇರಿಯಿಂದ ಆಚೆ ದಬ್ಬುತ್ತಿದ್ದಾರೆ. 'ಟ್ವಿಟರ್ ರೀಬ್ರಾಂಡಿಂಗ್: ಸ್ಮರಣಿಕೆಗಳು, ಕಲಾತ್ಮಕ ವಸ್ತುಗಳು, ಕಚೇರಿ ಸ್ವತ್ತುಗಳು ಮತ್ತು ಇನ್ನೂ ಹಲವಾರು ವಸ್ತುಗಳ ಹರಾಜು!' ('Twitter Rebranding: Online Auction Featuring Memorabilia, Art, Office Assets & More!') ಎಂಬ ಹರಾಜು ಬಿಡ್ಡಿಂಗ್ ಸೆಪ್ಟೆಂಬರ್ 12 ರಂದು ಪ್ರಾರಂಭವಾಗಲಿದ್ದು, ಎರಡು ದಿನಗಳಲ್ಲಿ ಮುಗಿಸಲು ಯೋಜಿಸಲಾಗಿದೆ ಎಂದು ವರದಿಯಾಗಿದೆ.
ಪ್ರತಿ ವಸ್ತುವಿಗೆ ಕನಿಷ್ಠ ಬಿಡ್ $ 25 ಆಗಿದೆ ಎಂದು ಈ ವಸ್ತುಗಳನ್ನು ಹರಾಜು ಹಾಕುತ್ತಿರುವ ಸಂಸ್ಥೆ ಹೆರಿಟೇಜ್ ಗ್ಲೋಬಲ್ ಪಾರ್ಟನರ್ಸ್ ಹೇಳಿದೆ. ಕಾಫಿ ಟೇಬಲ್ಗಳು, ದೊಡ್ಡ ಪಕ್ಷಿ ಪಂಜರಗಳು ಮತ್ತು ವೈರಲ್ ಆದ ಚಿತ್ರಗಳ ತೈಲ ವರ್ಣಚಿತ್ರಗಳು ಹರಾಜಿಗಿಟ್ಟಿರುವ 584 ವಸ್ತುಗಳಲ್ಲಿ ಸೇರಿವೆ. ಸಾಕಷ್ಟು ಮೇಜು ಮತ್ತು ಕುರ್ಚಿಗಳು, ಡಿಜೆ ಬೂತ್ ಮತ್ತು ಮ್ಯೂಸಿಕ್ ಬ್ಯಾಂಡ್ನ ಹಲವಾರು ಸಂಗೀತ ವಾದ್ಯಗಳು ಕೂಡ ಹರಾಜಿನ ಪಟ್ಟಿಯಲ್ಲಿವೆ.
ಸದ್ಯ ಸ್ಯಾನ್ ಫ್ರಾನ್ಸಿಸ್ಕೊದ 10ನೇ ಬೀದಿಯಲ್ಲಿರುವ ಟ್ವಿಟರ್ ಪ್ರಧಾನ ಕಚೇರಿಯ ಮೇಲಿರುವ ಪಕ್ಷಿಯ ಚಿತ್ರದ ಬೋರ್ಡ್ ಅನ್ನು ಕೂಡ ಹರಾಜಿಗಿಡಲಾಗಿದೆ. "ಪಕ್ಷಿಯು ಈಗಲೂ ಕಟ್ಟಡದ ಒಂದು ಬದಿಯಲ್ಲಿ ಕುಳಿತಿದೆ. ಇದನ್ನು ಅಲ್ಲಿಂದ ತೆರವುಗೊಳಿಸಿ ತೆಗೆದುಕೊಂಡು ಹೋಗಲು ಎಸ್ಎಫ್ ಪರವಾನಗಿ ಪಡೆದ ಕಂಪನಿಯನ್ನು ನೇಮಿಸಿಕೊಳ್ಳುವುದು ಖರೀದಿದಾರರ ಜವಾಬ್ದಾರಿಯಾಗಿರುತ್ತದೆ" ಎಂದು ಹರಾಜಿನಲ್ಲಿ ಉಲ್ಲೇಖಿಸಲಾಗಿದೆ.