ಲಂಡನ್: ಶೈಕ್ಷಣಿಕ ವಲಯದಲ್ಲಿ ಚಾಟ್ ಜಿಪಿಟಿ ಮಾದರಿಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಫ್ಟ್ವೇರ್ಗಳನ್ನು ಬಳಸುವ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಒಲವು ಹೊಂದಿದ್ದಾರೆ. ಆದರೆ, ಇದನ್ನು ಬಳಸಿ ನಕಲು ಮಾಡುವುದನ್ನು ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಯಾರ ಬಳಿಯೂ ಉತ್ತರವಿಲ್ಲ. ಉನ್ನತ ಶಿಕ್ಷಣದಲ್ಲಿ ಎಐ ಬಗ್ಗೆ ವಿದ್ಯಾರ್ಥಿಗಳ ವರ್ತನೆಗಳನ್ನು ಪರೀಕ್ಷಿಸಲು ಯುರೋಪ್ನಲ್ಲಿ ನಡೆಸಲಾದ ಬೃಹತ್ ಪ್ರಮಾಣದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಅಧ್ಯಯನಕ್ಕಾಗಿ ಸ್ವೀಡನ್‌ನ ಚಾಲ್ಮರ್ಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಸಂಶೋಧಕರು 6,000 ವಿದ್ಯಾರ್ಥಿಗಳ ಸಮೀಕ್ಷೆಯನ್ನು ನಡೆಸಿದರು. ಸುಮಾರು 56 ಪ್ರತಿಶತ ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಚಾಟ್‌ಬಾಟ್‌ಗಳನ್ನು ಬಳಸುವ ಬಗ್ಗೆ ಸಕಾರಾತ್ಮಕವಾಗಿದ್ದಾರೆ ಮತ್ತು 35 ಪ್ರತಿಶತ ಜನರು ನಿಯಮಿತವಾಗಿ ಚಾಟ್ ಜಿಪಿಟಿ ಬಳಸುತ್ತಾರೆ. ಆದಾಗ್ಯೂ, ಪರೀಕ್ಷೆಗಳಲ್ಲಿ ಉತ್ತರ ಬರೆಯಲು ಚಾಟ್‌ಬಾಟ್‌ಗಳನ್ನು ಬಳಸುವುದು ವಂಚನೆ ಎಂದು 62 ಪ್ರತಿಶತ ವಿದ್ಯಾರ್ಥಿಗಳು ನಂಬಿದ್ದಾರೆ.
ಚಾಟ್‌ಬಾಟ್‌ಗಳು ಮತ್ತು AI ಭಾಷಾ ಪರಿಕರಗಳು ವಿದ್ಯಾರ್ಥಿಗಳಾಗಿ ತಮ್ಮನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತವೆ ಮತ್ತು ಅಂಥ ಸಾಧನಗಳು ತಮ್ಮ ಶೈಕ್ಷಣಿಕ ಬರವಣಿಗೆ ಮತ್ತು ಒಟ್ಟಾರೆ ಭಾಷಾ ಕೌಶಲ್ಯಗಳನ್ನು ಸುಧಾರಿಸುತ್ತವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಬಹುತೇಕ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳು (95 ಪ್ರತಿಶತ) ಚಾಟ್ ಜಿಪಿಟಿಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದವರಾಗಿದ್ದಾರೆ ಮತ್ತು 35 ಪ್ರತಿಶತದಷ್ಟು ಜನರು ಚಾಟ್‌ಬಾಟ್ ಅನ್ನು ನಿಯಮಿತವಾಗಿ ಬಳಸುತ್ತಾರೆ.