ನವದೆಹಲಿ: ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಆ್ಯಪ್ಗಳ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದ ಇಳಿಕೆಯಾಗಿದೆ. ಗೂಗಲ್ನ ಬಿಗಿಯಾದ ನಿಯಂತ್ರಣ ನೀತಿಗಳ ಕಾರಣದಿಂದ ಪ್ಲೇ ಸ್ಟೋರ್ನಲ್ಲಿನ ಒಟ್ಟು ಆ್ಯಪ್ಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ. ತಂತ್ರಜ್ಞಾನ ವಿಶ್ಲೇಷಕ ಸಂಸ್ಥೆಯೊಂದರ ಅಧ್ಯಯನದ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಗೂಗಲ್ ಪ್ಲೇ ಅಪ್ಲಿಕೇಶನ್ಗಳ ಒಟ್ಟು ಸಂಖ್ಯೆಯಲ್ಲಿ 3,60,000 ರಷ್ಟು ಆ್ಯಪ್ಗಳು ಕಡಿಮೆಯಾಗಿವೆ.
ಸದ್ಯ ಪ್ಲೇ ಸ್ಟೋರ್ನಲ್ಲಿ ಕಡಿಮೆ ಗುಣಮಟ್ಟದ ಅಪ್ಲಿಕೇಶನ್ಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಆದಾಗ್ಯೂ ಗೂಗಲ್ ಪ್ಲೇ ಸ್ಟೋರ್ನಲ್ಲಿ ಇರುವ ಇನ್ನೂ ಶೇಕಡಾ 37 ರಷ್ಟು ಆ್ಯಪ್ಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ವರದಿ ತಿಳಿಸಿದೆ. ಮೂರು ವರ್ಷಗಳ ಹಿಂದೆ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಪ್ಲೇ ಸ್ಟೋರ್ನಲ್ಲಿ 2.95 ಮಿಲಿಯನ್ ಆ್ಯಪ್ಗಳು ಲಭ್ಯವಿದ್ದವು. 2021 ರ ಅಂತ್ಯದ ವೇಳೆಗೆ ಈ ಸಂಖ್ಯೆ 2.7 ಮಿಲಿಯನ್ಗೆ ಇಳಿಯಿತು ಮತ್ತು ಇನ್ನೂ ಕಡಿಮೆಯಾಗುತ್ತಲೇ ಇದೆ.
ಜನವರಿ 2022 ರಲ್ಲಿ ಲಭ್ಯವಿರುವ ಅಪ್ಲಿಕೇಶನ್ಗಳ ಸಂಖ್ಯೆ 2.64 ಮಿಲಿಯನ್ ಆಗಿತ್ತು. ಅಂದರೆ ಎರಡು ವರ್ಷಗಳಲ್ಲಿ 2,60,000 ರಷ್ಟು ಭಾರಿ ಸಂಖ್ಯೆಯ ಆ್ಯಪ್ಗಳು ಸ್ಟೋರ್ನಿಂದ ಹೊರಗೆ ಹೋಗಿರುವುದನ್ನು ಸೂಚಿಸುತ್ತದೆ. ಅಂಕಿ - ಅಂಶಗಳ ಪ್ರಕಾರ ಗೂಗಲ್ ಪ್ಲೇ ಅಪ್ಲಿಕೇಶನ್ಗಳ ಒಟ್ಟು ಸಂಖ್ಯೆಯು 2022 ರ ಮಧ್ಯದ ವೇಳೆಗೆ 2.65 ಮಿಲಿಯನ್ಗಿಂತ ಸ್ವಲ್ಪ ಹೆಚ್ಚಾಗಿತ್ತು. ಆದರೆ, ಕಳೆದ ವರ್ಷದಲ್ಲಿ 60,000 ದಷ್ಟು ಕಡಿಮೆಯಾಗಿದೆ.
ಅದರಲ್ಲಿ ಶೇಕಡಾ 63 ರಷ್ಟು ನಿಯಮಿತ ಅಪ್ಲಿಕೇಶನ್ಗಳಿವೆ ಮತ್ತು ಕಡಿಮೆ ಗುಣಮಟ್ಟದ ಅಪ್ಲಿಕೇಶನ್ಗಳು ಉಳಿದ ಶೇಕಡಾ 37 ರಷ್ಟಿವೆ. ಕಡಿಮೆ ಗುಣಮಟ್ಟದ ಅಪ್ಲಿಕೇಶನ್ಗಳಿಂದ ಆ್ಯಂಡ್ರಾಯ್ಡ್ ಬಳಕೆದಾರರನ್ನು ರಕ್ಷಿಸಲು ಮತ್ತು ಉತ್ತಮ ಗುಣಮಟ್ಟದ ಅಪ್ಲಿಕೇಶನ್ಗಳು ಸಿಗುವಂತಾಗಲು ಗೂಗಲ್ ಗಣನೀಯ ಪ್ರಯತ್ನ ಮಾಡುತ್ತಿದೆ.