ನವದೆಹಲಿ: ಅಪರೂಪದ ವಿದ್ಯಮಾನವೊಂದರಲ್ಲಿ ಅಕ್ಟೋಬರ್ ತಿಂಗಳಲ್ಲಿ ಎರಡನೇ ಬಾರಿಗೆ ಗ್ರಹಣ ಗೋಚರಿಸಲಿದೆ. ಅಕ್ಟೋಬರ್ 29 ರಂದು ತನ್ನ ಎರಡನೇ ಗ್ರಹಣಕ್ಕೆ ತಿಂಗಳು ಸಾಕ್ಷಿಯಾಗಲಿದೆ. ಅಕ್ಟೋಬರ್ 14 ರಂದು ಸಂಭವಿಸಿದ ಸೂರ್ಯಗ್ರಹಣದ ಕೇವಲ 14 ದಿನಗಳ ನಂತರ 29ರಂದು ಭಾಗಶಃ ಚಂದ್ರ ಗ್ರಹಣ ಸಂಭವಿಸಲಿದೆ.
ಗ್ರಹಣದ ಸಮಯ:ವರ್ಷದ ಈ ಕೊನೆಯ ಗ್ರಹಣವಾಗಿರುವ ಈ ಚಂದ್ರಗ್ರಹಣವು ಭಾರತೀಯ ಸಮಯದ ಪ್ರಕಾರ ಅಕ್ಟೋಬರ್ 28 ರ ಶನಿವಾರ ರಾತ್ರಿ ಪ್ರಾರಂಭವಾಗಲಿದೆ. ಈ ಗ್ರಹಣದ ಒಟ್ಟು ಅವಧಿ 03 ಗಂಟೆ 07 ನಿಮಿಷಗಳು. ವಿಜ್ಞಾನ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಭಾಗಶಃ ಚಂದ್ರ ಗ್ರಹಣವು 2023 ರ ಅಕ್ಟೋಬರ್ 28 - 29 ರಂದು ಸಂಭವಿಸಲಿದೆ (6-7 ಕಾರ್ತಿಕ, 1945 ಶಕ ಯುಗ). ಗ್ರಹಣ ಆರಂಭದ ಹಂತವು ಅಕ್ಟೋಬರ್ 29 ರಂದು ಭಾರತೀಯ ಕಾಲಮಾನ 01 ಗಂಟೆ 05 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು ಭಾರತೀಯ ಕಾಲಮಾನ 02 ಗಂಟೆ 24 ನಿಮಿಷಕ್ಕೆ ಕೊನೆಗೊಳ್ಳುತ್ತದೆ.
ಭಾಗಶಃ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದೆಯೇ?:ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ, ಏಷ್ಯಾ, ಯುರೋಪ್, ಆಫ್ರಿಕಾ, ಪೂರ್ವ ದಕ್ಷಿಣ ಅಮೆರಿಕ, ಈಶಾನ್ಯ ಉತ್ತರ ಅಮೆರಿಕ, ಅಟ್ಲಾಂಟಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಗ್ರಹಣ ಗೋಚರಿಸಲಿದೆ ಎಂದು ಪಿಐಬಿ ಪ್ರಕಟಣೆ ತಿಳಿಸಿದೆ. ಭಾಗಶಃ ಚಂದ್ರಗ್ರಹಣವು ಮಧ್ಯರಾತ್ರಿಯ ಸುಮಾರಿಗೆ ಭಾರತದ ಎಲ್ಲ ಸ್ಥಳಗಳಿಂದ ಗೋಚರಿಸುತ್ತದೆ.