ಸ್ಯಾನ್ ಫ್ರಾನ್ಸಿಸ್ಕೊ (ಅಮೆರಿಕ): ಎಲೋನ್ ಮಸ್ಕ್ ಒಡೆತನದ ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ ಕಂಪನಿ ನ್ಯೂರಾಲಿಂಕ್ ಶುಕ್ರವಾರ ತನ್ನ ಮೊದಲ ಮಾನವ ಕ್ಲಿನಿಕಲ್ ಅಧ್ಯಯನವನ್ನು ಪ್ರಾರಂಭಿಸಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (US Food and Drug Administration -FDA) ಅನುಮೋದನೆ ನೀಡಿದೆ ಎಂದು ಘೋಷಿಸಿದೆ.
ಅಂದರೆ ಇನ್ನು ಮುಂದೆ ಮಾನವರ ತಲೆಯಲ್ಲಿ ನ್ಯೂರಾಲಿಂಕ್ ಸಾಧನವನ್ನು ವಾಸ್ತವದಲ್ಲಿ ಅಳವಡಿಸಿಕೊಳ್ಳಬಹುದು. "ನಮ್ಮ ಮೊದಲ ಮಾನವ ಕ್ಲಿನಿಕಲ್ ಅಧ್ಯಯನವನ್ನು ಪ್ರಾರಂಭಿಸಲು ನಾವು ಎಫ್‌ಡಿಎ ಅನುಮೋದನೆಯನ್ನು ಪಡೆದಿದ್ದೇವೆ. ಇದು ಎಫ್‌ಡಿಎ ಜೊತೆಗೆ ನ್ಯೂರಾಲಿಂಕ್ ತಂಡವು ಮಾಡಿದ ಅದ್ಭುತ ಕೆಲಸದ ಫಲಿತಾಂಶವಾಗಿದೆ ಮತ್ತು ಒಂದು ದಿನ ನಮ್ಮ ತಂತ್ರಜ್ಞಾನವು ಅನೇಕ ಜನರಿಗೆ ಸಹಾಯ ಮಾಡಲು ಅನುವು ಮಾಡಿಕೊಡುವ ಪ್ರಮುಖ ಮೊದಲ ಹಂತವನ್ನು ಪ್ರತಿನಿಧಿಸುತ್ತದೆ" ಎಂದು ನ್ಯೂರಾಲಿಂಕ್ ಟ್ವೀಟ್ ಮಾಡಿದೆ.
ಎಫ್‌ಡಿಎ ಅನುಮೋದನೆ ನೀಡಿದ ನಂತರ ನ್ಯೂರಾಲಿಂಕ್ ತಂಡವನ್ನು ಅಭಿನಂದಿಸಿ ಮಸ್ಕ್ ಟ್ವೀಟ್ ಮಾಡಿದ್ದಾರೆ. ಆದರೆ ಕ್ಲಿನಿಕಲ್ ಪ್ರಯೋಗಕ್ಕಾಗಿ ನೇಮಕಾತಿ ಇನ್ನೂ ಆರಂಭವಾಗಿಲ್ಲ, ಈ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಕಂಪನಿ ಹೇಳಿದೆ. ಮಾರ್ಚ್‌ನಲ್ಲಿ ಸುರಕ್ಷತೆಯ ಅಪಾಯಗಳನ್ನು ಉಲ್ಲೇಖಿಸಿ ಮಾನವ ಮೆದುಳಿನಲ್ಲಿ ಚಿಪ್ ಅನ್ನು ಅಳವಡಿಸುವ ನ್ಯೂರಾಲಿಂಕ್‌ನ ಪ್ರಸ್ತಾಪವನ್ನು ಎಫ್‌ಡಿಎ ತಿರಸ್ಕರಿಸಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ, ನ್ಯೂರಾಲಿಂಕ್‌ನ ಸಾಧನವು ಮಾನವ ಪ್ರಯೋಗಗಳಿಗೆ ಸಿದ್ಧವಾಗಿದೆ ಎಂದು ಮಸ್ಕ್ ಹೇಳಿಕೊಂಡಿದ್ದರು. ಹಂದಿಗಳು ಮತ್ತು ಕೋತಿಗಳ ಮೇಲೆ ಇದನ್ನು ಪ್ರಯೋಗ ಮಾಡಿದ ಸುಮಾರು ಆರು ತಿಂಗಳ ನಂತರ ಅದನ್ನು ಮಾನವರ ಮೆದುಳಿಗೆ ಅಳವಡಿಸುವ ಪ್ರಯತ್ನಗಳು ನಡೆಯುತ್ತಿವೆ.