ಹೈದರಾಬಾದ್:ಚಂದ್ರನ ಅಧ್ಯಯನದ ಹಾದಿಯಲ್ಲಿರುವ ಇಸ್ರೋ ಚಂದ್ರಯಾನ-3 ನೌಕೆಯನ್ನು ಈಗಾಗಲೇ ನಭಕ್ಕೆ ಕಳುಹಿಸಿದೆ. ಈ ನೌಕೆ ಇನ್ನು ಕೆಲವೇ ದಿನಗಳಲ್ಲಿ ಚಂದ್ರನ ಅಂಗಳದಲ್ಲಿ ಇಳಿಯಲಿದೆ. ಇದರ ನಡುವೆಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತೊಂದು ಪ್ರಮುಖ ಉಡಾವಣೆಗೆ ತಯಾರಿ ನಡೆಸುತ್ತಿದೆ.
ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಮಿಷನ್ ಆದಿತ್ಯ-ಎಲ್1 ಉಡಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಸೌರ ವಾತಾವರಣವನ್ನು ಕೂಲಂಕಷವಾಗಿ ಅಧ್ಯಯನ ಮಾಡುವುದು ಯೋಜನೆಯ ಗುರಿ. ಉದ್ದೇಶಿತ ಆದಿತ್ಯ-ಎಲ್1 ಉಪಗ್ರಹವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಪಿಎಸ್ಎಲ್ವಿ-ಸಿ57 ರಾಕೆಟ್ ಮೂಲಕ ಉಡಾವಣೆಗೆ ಯೋಜಿಸಲಾಗಿದೆ. ಇದರ ಭಾಗವಾಗಿ ಆದಿತ್ಯ-ಎಲ್1 ಉಪಗ್ರಹ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವನ್ನು ತಲುಪಿದೆ.
ಇಸ್ರೋ ಈ ವರ್ಷ ಆರು ನೌಕೆಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಚಂದ್ರನ ಅಧ್ಯಯನಕ್ಕಾಗಿ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಿದ್ದು, ಚಂದ್ರನ ಕಕ್ಷೆಗೆ ಸೇರಿಸಿದೆ. ಇದೇ ತಿಂಗಳ 23ರಂದು ಚಂದ್ರಯಾನ-3 ಲ್ಯಾಂಡರ್ ಚಂದಮಾಮನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಈ ಸಾಹಸವನ್ನು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.
ಬೆಂಗಳೂರಿನಲ್ಲಿ ಆದಿತ್ಯ ಎಲ್-1 ತಯಾರಿ:ಚಂದ್ರನ ಅಧ್ಯಯನ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ-ಎಲ್1 ರಾಕೆಟ್ ಸಿದ್ಧಗೊಳಿಸಲಾಗಿದೆ. ಇದನ್ನು ಬೆಂಗಳೂರಿನ ಯು.ಆರ್.ರಾವ್ ಸಂಶೋಧನಾ ಕೇಂದ್ರದಲ್ಲಿ ತಯಾರಿಸಲಾಗಿದೆ. ಇದನ್ನು ಸೆಪ್ಟೆಂಬರ್ನಲ್ಲಿ ಉಡಾವಣೆ ಮಾಡುವ ಉದ್ದೇಶವಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.