ನವದೆಹಲಿ: ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಮತ್ತು ಯುಎಸ್ ಮಾಜಿ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ನಕಲಿ ವೀಡಿಯೊಗಳ ಮೂಲಕ 2019 ರಲ್ಲಿ ಡೀಪ್ ಫೇಕ್ ತಂತ್ರಜ್ಞಾನ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಡೀಪ್ ಲರ್ನಿಂಗ್ ಎಂಬ ಕೃತಕ ಬುದ್ಧಿಮತ್ತೆಯ (ಎಐ) ರೂಪದ ಮೂಲಕ ಸೆಲೆಬ್ರಿಟಿಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ರಚಿಸುವ ಈ ತಂತ್ರಜ್ಞಾನ ಫೋಟೋಶಾಪಿಂಗ್ಗೆ ಪರ್ಯಾಯವಾಗಿದೆ. ತಜ್ಞರ ಪ್ರಕಾರ ಎಐ ರಚಿಸಿದ ಡೀಪ್ ಫೇಕ್ ಆಡಿಯೊ ಹಾಗೂ ವೀಡಿಯೊಗಳ ಪ್ರಸಾರ ಇತ್ತೀಚಿನ ದಿನಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ.
ಎಲ್ಲರಿಗೂ ಸುಲಭವಾಗಿ ಡೀಪ್ ಫೇಕ್ ತಂತ್ರಜ್ಞಾನ ಲಭ್ಯವಾಗುತ್ತಿರುವುದು ಡೀಪ್ ಫೇಕ್ ಕಂಟೆಂಟ್ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ಗಾಜ್ಶೀಲ್ಡ್ ಇನ್ಫೋಟೆಕ್ನ ಸಿಇಒ ಸೋನಿತ್ ಜೈನ್. "ಮನರಂಜನೆ, ರಾಜಕೀಯ ಟೀಕೆ ಮತ್ತು ಮೋಸದ ಚಟುವಟಿಕೆಗಳಲ್ಲಿ ಡೀಪ್ ಫೇಕ್ ಬಳಸಲಾಗುತ್ತಿದೆ. ಆದರೆ ಸ್ಪಷ್ಟ ಅನುಮತಿಯಿಲ್ಲದೆ ಡೀಪ್ ಫೇಕ್ ಸೃಷ್ಟಿಗಾಗಿ ವೈಯಕ್ತಿಕ ಡೇಟಾ ಸಂಗ್ರಹಣೆ ಮತ್ತು ಬಳಕೆಯನ್ನು ತಡೆಗಟ್ಟಲು ಡೇಟಾ ರಕ್ಷಣೆ ಮತ್ತು ಗೌಪ್ಯತೆ ಕಾನೂನುಗಳನ್ನು ಬಲಪಡಿಸಬೇಕಿದೆ" ಎಂದು ಜೈನ್ ಐಎಎನ್ಎಸ್ಗೆ ತಿಳಿಸಿದರು.
ಡೀಪ್ ಫೇಕ್ ಗಳನ್ನು ಫಿಶಿಂಗ್ ದಾಳಿಗಳಲ್ಲಿ ಬಳಸಬಹುದು ಅಥವಾ ಕಂಪನಿಯೊಂದರ ಉದ್ಯೋಗಿಗಳು ಕಂಪನಿಯ ಡೇಟಾಗೆ ಅಪಾಯ ತರುವಂತೆ ಮಾಡಬಹುದು. ಡೀಪ್ ಫೇಕ್ ತಂತ್ರಜ್ಞಾನವು ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಗೌಪ್ಯತೆ ಮತ್ತು ವೈಯಕ್ತಿಕ ಹಕ್ಕುಗಳಿಗೆ ಗಮನಾರ್ಹ ಕುಂದು ತರಬಹುದು. ರಶ್ಮಿಕಾ ಮಂದಣ್ಣ ಪ್ರಕರಣದಲ್ಲಿ ನೋಡಿದಂತೆ, ವ್ಯಕ್ತಿಯ ಪ್ರತಿಷ್ಠೆಗೆ ಹಾನಿ ಮಾಡುವ ಅಥವಾ ವಿಶ್ವಾಸಾರ್ಹ ನಕಲಿ ವೀಡಿಯೊಗಳನ್ನು ರಚಿಸಲು ಇದನ್ನು ಬಳಸಬಹುದು.