ಬೆಂಗಳೂರು:ಚಂದ್ರಯಾನ-2 ರಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಪಾಠ ಕಲಿತಿದೆ. ಇದೇ ಅನುಭವಗಳನ್ನು ಆಧರಿಸಿ, ಇಸ್ರೋ ಜಾಗತಿಕ ಬಾಹ್ಯಾಕಾಶ ಸಂಶೋಧನಾ ರಂಗದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುವ ಗುರಿ ಹೊಂದಿದೆ. ಇಸ್ರೋದ ಎಂಜಿನಿಯರ್‌ಗಳು ಚಂದ್ರಯಾನ-3 ರಲ್ಲಿ ವಿಕ್ರಮ್ ಲ್ಯಾಂಡರ್‌ನ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ನಿರ್ಣಾಯಕ ವಿನ್ಯಾಸ ಹಾಗೂ ಮಾರ್ಪಾಡುಗಳು ಮತ್ತು ತ್ವರಿತ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಭಾರತದ ಚಂದ್ರಯಾನ 3 ನೇ ಯೋಜನೆಯ ಭಾಗವಾಗಿ ಇಂದು ಚಂದ್ರನ ಪರಿಶೋಧನಾ ಕಾರ್ಯಾಚರಣೆ ಆರಂಭಿಸಲಿದೆ. ಈ ಮಹತ್ವದ ಕಾರ್ಯಕ್ಕೆ 26 ಗಂಟೆಗಳ ಕೌಂಟ್‌ಡೌನ್ ಗುರುವಾರ ಮಧ್ಯಾಹ್ನ 1:05 ರಿಂದಲೇ ಪ್ರಾರಂಭವಾಗಿದೆ. ಇದು ಲ್ಯಾಂಡರ್ ಮತ್ತು ಚಂದ್ರಯಾನ -2 ರಂತೆಯೇ ರೋವರ್ ಅನ್ನು ಒಳಗೊಂಡಿರುತ್ತದೆ. ನೌಕೆಯು 100 ಕಿಮೀ ಚಂದ್ರನ ಕಕ್ಷೆಯಲ್ಲಿರುವವರೆಗೆ ಪ್ರೊಪಲ್ಷನ್ ಮಾಡ್ಯೂಲ್ ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಒಯ್ಯುತ್ತದೆ. ಪ್ರೊಪಲ್ಷನ್ ಮಾಡ್ಯೂಲ್ ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಪೋಲಾರಿ ಮೆಟ್ರಿಕ್ ಅಳತೆಗಳನ್ನು ಅಧ್ಯಯನ ಮಾಡಲು ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (ಶೇಪ್) ಪೇಲೋಡ್ ಸ್ಪೆಕ್ಟ್ರೋ-ಪೋಲಾರಿಮೆಟ್ರಿಯಂತಹ ಮಹತ್ವದ ಯಂತ್ರವನ್ನು ಹೊಂದಿದೆ.
ಚಂದ್ರಯಾನ 3 ಬಾಹ್ಯಾಕಾಶ ನೌಕೆಯನ್ನು ಭಾರತದ ಹೆವಿ - ಲಿಫ್ಟ್ ರಾಕೆಟ್ 642-ಟನ್ LVM3 ಮೂಲಕ ಸಾಗಿಸಲಾಗುತ್ತದೆ. ಮಧ್ಯಾಹ್ನ 2:35ಕ್ಕೆ, ಮೂರು ಹಂತದ LVM3 ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟಾ ರಾಕೆಟ್ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಕೇಂದ್ರದಿಂದ ನಭಕ್ಕೆ ಜಿಗಿಯಲಿದೆ.
ಚಂದ್ರಯಾನ-3 ರ ಪ್ರಾಥಮಿಕ ಉದ್ದೇಶ ಎಂದರೆ, ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆಗುವುದು. ಇದಕ್ಕಾಗಿ ಲ್ಯಾಂಡಿಂಗ್ ಸೈಟ್ ಅನ್ನು ಅನ್ವೇಷಿಸಲು ರೋವರ್ ಕೂಡಾ ನಿಯೋಜಿಸಲಾಗಿದೆ. ಬಾಹ್ಯಾಕಾಶ ನೌಕೆ ಹೊತ್ತೊಯ್ಯುವ ಲ್ಯಾಂಡರ್ ಆಗಸ್ಟ್ 23 ಅಥವಾ 24 ರಂದು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ನಿರೀಕ್ಷೆಯಿದೆ. ಚಂದ್ರಯಾನ-3 ರ ಲ್ಯಾಂಡರ್ 1,723.89 ಕೆಜಿ ತೂಕ ಹೊಂದಿದ್ದು, 1,471 ಕೆಜಿ ತೂಕದ ಚಂದ್ರಯಾನ-2 ಗಿಂತ ಭಿನ್ನವಾಗಿದೆ.
ಸೆಪ್ಟೆಂಬರ್ 2019 ರಲ್ಲಿ, ಚಂದ್ರಯಾನ-2ದ ವೇಳೆ ಇಸ್ರೋ ಲ್ಯಾಂಡಿಂಗ್ ಮಿಷನ್ ಅನ್ನು ಯಶಸ್ವಿಯಾಗಿ ಚಂದ್ರನಲ್ಲಿ ನೆಲೆಗೊಳಿಸಲು ಸಾಧ್ಯವಾಗಿರಲಿಲ್ಲ. ಇದು ಇಸ್ರೋ ವಿಜ್ಞಾನಿಗಳನ್ನು ತೀವ್ರ ನಿರಾಸೆಗೆ ದೂಡಿತ್ತು. ಆದರೆ, ಆರ್ಬಿಟರ್ ಇನ್ನೂ ಜೀವಂತವಾಗಿದ್ದು, ಚಂದ್ರನ ಮೇಲಿನ ಎಲ್ಲ ಡೇಟಾವನ್ನು ಕಳುಹಿಸುತ್ತದೆ.
ಚಂದ್ರಯಾನ 2ರ ಲ್ಯಾಂಡರ್ ಲ್ಯಾಂಡಿಂಗ್ ವೇಳೆ ಆಗಿದ್ದ ಪ್ರಮಾದ ಏನು?: ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಯೋಜಿತ 55 ಡಿಗ್ರಿಗಳಿಗೆ ಬದಲಾಗಿ 410 ಡಿಗ್ರಿಗಳಷ್ಟು ಓರೆಯಾಗಿದ್ದರಿಂದ ಸುರಕ್ಷಿತವಾಗಿ ಚಂದ್ರನ ಅಂಗಳದಲ್ಲಿ ಇಳಿಯಲು ವಿಫಲವಾಯಿತು. ನಾಲ್ಕು ಹಂತಗಳಲ್ಲಿ ವಿಕ್ರಮ್ ಲ್ಯಾಂಡರ್‌ನ ವೇಗವು 6000 kmph ನಿಂದ 0 kmph ವರೆಗೆ ನಿಧಾನವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ISRO ಚಂದ್ರನ ಮೇಲ್ಮೈಯಲ್ಲಿ ವಿಕ್ರಮ ಲ್ಯಾಂಡರ್, ಲ್ಯಾಂಡ್ ಆಗುವ ಮುನ್ನವೇ ಅದರೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು. ಹೀಗಾಗಿ ಲ್ಯಾಂಡರ್ ನಿಯಂತ್ರಣ ಮಾಡಲು ಇಸ್ರೋಗೆ ಸಾಧ್ಯವಾಗಲಿಲ್ಲ.
ಸಂವಹನ ಸ್ಥಗಿತ: ಇಸ್ರೋ ಲ್ಯಾಂಡಿಂಗ್ ಮೇಲ್ಮೈಯಿಂದ ಕೇವಲ 400 ಮೀಟರ್ ದೂರದಲ್ಲಿ ವಿಕ್ರಮ್ ಸಂಪರ್ಕವನ್ನು ಕಳೆದುಕೊಂಡಿತ್ತು. ಒಂದೊಮ್ಮೆ ಸಂಪರ್ಕ ಕಳೆದುಕೊಳ್ಳದೇ ಇದ್ದಿದ್ದರೆ, ವಿಕ್ರಮನನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಇಳಿಸಬಹುದಾಗಿತ್ತು. ಆದರೆ ಸಂಪರ್ಕ ಸಾಧ್ಯವಾಗದೇ ನಿರಾಶೆಯಾಗಿತ್ತು.