ಭೂಮಿ..! ಮಾನವನ ಬದುಕಿನ ಮೂಲ. ಮನುಷ್ಯರಿಗೆ ಸಂವಿಧಾನದತ್ತವಾಗಿರುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಜೊತೆಗೆ ಭೂಮಿ ಹೊಂದುವ ಹಕ್ಕನ್ನೂ ನೀಡಲಾಗಿದೆ ಎಂಬುದು ನಿಮಗೆ ಗೊತ್ತಾ. ಈ ಅಂಶ ಸಂವಿಧಾನದಲ್ಲೇ ಅಡಕ ಮಾಡಲಾಗಿದೆ. ಮಾನವ ಜೀವನಕ್ಕೆ ಅಗತ್ಯವಾದ ಕನಿಷ್ಠ ಹಕ್ಕುಗಳ ಜೊತೆಯಲ್ಲಿ ಭೂಮಿ ಹೊಂದುವ ಹಕ್ಕನ್ನೂ ಸೇರಿಸಲಾಗಿದೆ. 1948 ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆಯಿಂದ 2018 ರ ರೈತರ ಹಕ್ಕುಗಳ ಘೋಷಣೆಯವರೆಗೆ ಭೂಮಿಯನ್ನು ಹೊಂದುವ ಹಕ್ಕನ್ನು ಪ್ರತಿಪಾದಿಸಲಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಮೇಲಿನ ಅಂತಾರಾಷ್ಟ್ರೀಯ ಒಪ್ಪಂದವನ್ನು 1966 ರಲ್ಲಿ ವಿಶ್ವಸಂಸ್ಥೆಯು ಅಂಗೀಕರಿಸಿತು. ಭಾರತ ಅದನ್ನು ಈಗಾಗಲೇ ಅನುಮೋದಿಸಿದೆ.
ಪ್ರತಿಯೊಬ್ಬ ಮನುಷ್ಯನಿಗೂ ಭೂಮಿ ಹೊಂದುವ ಹಕ್ಕಿದೆ. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಅನುಸಾರ ಯಾರೊಬ್ಬರ ಭೂಮಿಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಇಂಥದ್ದೊಂದು ನಿಯಮ ಭಾರತ ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಯಲ್ಲೂ ಇತ್ತು. ನಂತರ, ಅದನ್ನು ಆ ಪಟ್ಟಿಯಿಂದ ತೆಗೆದುಹಾಕಲಾಯಿತು. ಆದರೂ, ಅದು ಸಾಂವಿಧಾನಿಕ ಹಕ್ಕಾಗಿಯೇ ಮುಂದುವರಿದಿದೆ. ಭೂಮಿಯ ಮೇಲಿನ ಹಕ್ಕನ್ನು ವಿವಿಧ ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ವಿವಿಧ ರೂಪಗಳಲ್ಲಿ ಪ್ರಸ್ತಾಪಿಸಲಾಗಿದೆ.
ಆಹಾರ ಭದ್ರತೆ, ಎಲ್ಲರಿಗೂ ವಸತಿ, ಕುಡಿಯುವ ನೀರು, ಮಾಲಿನ್ಯ ಮುಕ್ತ ಪರಿಸರ, ಆರೋಗ್ಯಕರ ಜೀವನ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳಲ್ಲಿ ಎಲ್ಲರಿಗೂ ಸಮಾನ ಅವಕಾಶವಿರಬೇಕು ಎಂದು ಯುನೆಸ್ಕೋ ಹೇಳಿದೆ.
ಸರ್ಕಾರದಿಂದಲೂ ಭೂಸ್ವಾಧೀನ:ಪ್ರಸ್ತುತ ಭೂಮಿ ಹೊಂದುವ ಹಕ್ಕುಗಳಿಗೆ ಅಭಿವೃದ್ಧಿ ಕಾರ್ಯಗಳು, ನಗರೀಕರಣ, ಹೆಚ್ಚುತ್ತಿರುವ ಭೂಮಿಯ ಮೌಲ್ಯಗಳು, ವಿವಿಧ ಅಗತ್ಯಗಳಿಗಾಗಿ ಭೂಸ್ವಾಧೀನ, ಪರಿಸರ ಬದಲಾವಣೆಗಳು ತೊಡಕಾಗಿವೆ. ಯೋಜನೆಗಳು, ಕೈಗಾರಿಕೆಗಳು, ಸಾರ್ವಜನಿಕ ಹಿತಾಸಕ್ತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಂತಹ ವಿವಿಧ ಕಾರಣಗಳಿಗಾಗಿ ಸರ್ಕಾರವೇ ಜನರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತವೆ. ಅದು ಒಮ್ಮೊಮ್ಮೆ ಬಲವಂತವಾಗಿಯೂ ಭೂಸ್ವಾಧೀನ ನಡೆದಾಗ ಭೂಮಿ ಕಳೆದುಕೊಂಡವರು ಸಂವಿಧಾನ ನೀಡಿದ ಹಕ್ಕಿನಿಂದಲೇ ವಂಚಿತರಾಗುತ್ತಾರೆ.