ವಾಷಿಂಗ್ಟನ್: ಕೊರೊನಾ ವೈರಸ್‌ಗೆ ಇಡೀ ವಿಶ್ವವೇ ಹೆದರುತ್ತಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಆದರೆ, ಈ ರೋಗಕ್ಕೆ ಮದ್ದು ಪತ್ತೆ ಮಾಡಲು ಇನ್ನೂ ಸಾಧ್ಯವಾಗುತ್ತಿಲ್ಲ. ಲಸಿಕೆ ಅಭಿವೃದ್ಧಿಗೆ ಕನಿಷ್ಠ 1 ವರ್ಷ ಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಹಿಯಾದ ಸುದ್ದಿ ಕೊಟ್ಟಿದ್ದಾರೆ.
ಶ್ವೇತಭವನದ ಕೊರೊನಾ ವೈರಸ್ ಕುರಿತು ಬ್ರೀಫಿಂಗ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಟ್ರಂಪ್, 'ನಾವು ಲಸಿಕೆಗೆ ತುಂಬಾ ಹತ್ತಿರದಲ್ಲಿದ್ದೇವೆ' ಎಂದಿದ್ದಾರೆ. ಅಮೆರಿಕ, ಜರ್ಮನಿ, ಇಂಗ್ಲೆಂಡ್ ಮತ್ತು ಚೀನಾದಲ್ಲಿ ಲಸಿಕೆಯ ಪ್ರಯೋಗಗಳು ನಡೆಯುತ್ತಿವೆ. ಇವರೊಂದಿಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಶ್ವೇತಭವನದ ಕೊರೊನಾ ವೈರಸ್ ಟಾಸ್ಕ್ ಫೋರ್ಸ್ ಕೋ - ಆರ್ಡಿನೇಟರ್ ಡೆಬೊರಾ ಬಿರ್ಕ್ಸ್ ಸಂಪರ್ಕ ಹೊಂದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ನಮ್ಮಲ್ಲಿ ಸಾಕಷ್ಟು ದೊಡ್ಡ, ಅದ್ಭುತ ಮನಸ್ಸುಗಳಿವೆ. ದುರದೃಷ್ಟವಶಾತ್ ನಾವು ಪರೀಕ್ಷೆಗೆ ತೀರ ಹತ್ತಿರದಲ್ಲಿಲ್ಲ. ಏಕೆಂದರೆ, ಪರೀಕ್ಷೆ ಆರಂಭವಾದಾಗ ಅದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ನಾವು ಅದನ್ನು ಪೂರ್ಣಗೊಳಿಸುತ್ತೇವೆ ಎಂದಿದ್ದಾರೆ.
ಲಸಿಕೆ ವ್ಯಾಪಕ ಬಳಕೆಗೆ ಅನುಮೋದನೆ ಪಡೆಯಲು 12-18 ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅಮೆರಿಕ ಸರ್ಕಾರದ ಉನ್ನತ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಈ ಹಿಂದೆ ಹೇಳಿದ್ದರು. ಲಸಿಕೆ ಸಿದ್ಧವಾಗುವುದಕ್ಕೆ ಕನಿಷ್ಠ 12-18 ತಿಂಗಳು ಬೇಕಾಗುತ್ತದೆ ಎಂದು ಹೆಚ್ಚಿನ ಆರೋಗ್ಯ ತಜ್ಞರು ಒಪ್ಪುತ್ತಾರೆ.
ಟ್ರಂಪ್ ಬಳಿಕ ಮಾತನಾಡಿದ ಪೆನ್ಸ್, ಕೊರೊನಾ ವೈರಸ್ ವಿರುದ್ಧದ ಅಮೆರಿಕದ ಹೋರಾಟದಲ್ಲಿ ಡೇಟಾವು ಪ್ರಗತಿಯ ಭರವಸೆಯ ಚಿಹ್ನೆಗಳನ್ನು ತೋರಿಸುತ್ತಿದೆ. ನ್ಯೂಯಾರ್ಕ್ ಮೆಟ್ರೋ ಪ್ರದೇಶ, ನ್ಯೂಜೆರ್ಸಿ, ಕನೆಕ್ಟಿಕಟ್, ಡೆಟ್ರಾಯಿಟ್ ಮತ್ತು ನ್ಯೂ ಓರ್ಲಿಯನ್ಸ್ ಸೇರಿದಂತೆ ಪ್ರಮುಖ ವೈರಸ್ ಹಾಟ್‌ಸ್ಪಾಟ್‌ಗಳು ಉತ್ತುಂಗಕ್ಕೇರಿವೆ ಎಂದರು.