ಜೈಪುರ: ಬಿಹಾರದಿಂದ ರಾಜಸ್ಥಾನಕ್ಕೆ ಅಕ್ರಮವಾಗಿ ಕರೆದುಕೊಂಡು ಬರಲಾಗುತ್ತಿದ್ದ 19 ಮಂದಿ ಬಾಲ ಕಾರ್ಮಿಕರನ್ನು ಮಾನವ ಕಳ್ಳಸಾಗಣೆ ವಿರೋಧಿ ಘಟಕ ರಕ್ಷಿಸಿದೆ.
ನಿಖರ ಮಾಹಿತಿ ಮೇರೆಗೆ ರಾಜಸ್ಥಾನ ಪೊಲೀಸರ ಮಾನವ ಕಳ್ಳಸಾಗಣೆ ನಿಗ್ರಹ ಘಟಕದ ಸಿಬ್ಬಂದಿ ಎರಡು ಟ್ರಕ್ಗಳನ್ನು ಅಡ್ಡಗಟ್ಟಿದ್ದಾರೆ. ಜೀತದಾಳಾಗಿ ಬಳಸಿಕೊಳ್ಳಲು ಕರೆದೊಯ್ಯುತ್ತಿದ್ದ 19 ಮಕ್ಕಳನ್ನು ರಕ್ಷಿಸಿ, ಟ್ರಕ್ ಚಾಲಕರು ಸೇರಿ ಒಟ್ಟು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ಹೊರ ಬಂದಿದೆ. ಸದ್ಯ ಮಕ್ಕಳನ್ನು ನಾವು ನೋಡಿಕೊಳ್ಳುತ್ತಿದ್ದು, ಅವರನ್ನು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿಸಲು ವಿಳಾಸ ಕಲೆ ಹಾಕುತ್ತಿದ್ದೇವೆ ಎಂದು ಜೈಪುರದ ಪೊಲೀಸ್ ಅಧಿಕಾರಿ ವಿಕ್ರಮ್ ಸಿಂಗ್ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ರಾಜಸ್ಥಾನ ಪೊಲೀಸರು ಮಕ್ಕಳ ಕಳ್ಳಸಾಗಣೆ ವಿರುದ್ಧ ಹೋರಾಡುತ್ತಿದ್ದಾರೆ. ಮುಖ್ಯವಾದ ವಿಷಯವೆಂದರೆ ಬಹುತೇಕ ಪ್ರಕರಣಗಳಲ್ಲಿ ಜೀವನ ಸಾಗಿಸಲು ಪೋಷಕರೇ ಹಣಕ್ಕಾಗಿ ತಮ್ಮ ಮಕ್ಕಳನ್ನು ಜೀತಕ್ಕೆ ಕಳುಹಿಸುತ್ತಿದ್ದಾರೆ.