ಲಂಡನ್: ಸರಣಿ ರಾಜೀನಾಮೆಗಳಿಂದ ಕಂಗೆಟ್ಟಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಭ್ರಷ್ಟಾಚಾರ ಪ್ರಕರಣ ಹಾಗೂ ಸ್ವಪಕ್ಷೀಯ ಸಚಿವರಿಂದ ತೀವ್ರ ವಿರೋಧಕ್ಕೊಳಗಾಗಿದ್ದ ಬೋರಿಸ್ ಇದೀಗ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿರುವ ಬೋರಿಸ್, ಈ ನಿರ್ಧಾರ ಪ್ರಕಟಿಸಿದ್ದು, ಮುಂದಿನ ಹೊಸ ನಾಯಕನಿಗೆ ಸಂಪೂರ್ಣವಾಗಿ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಪ್ರಧಾನಿಯಾಗಿ ನಾನು ಯಶಸ್ಸು ಕಾಣಲಿಲ್ಲ ಎಂಬ ಕೊರಗು ನನ್ನಲ್ಲಿದ್ದು, ನನಗೆ ಸಹಕಾರ ನೀಡಿರುವ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಬ್ರಿಟನ್ ಹಣಕಾಸು ಸಚಿವ ರಿಷಿ ಸುನಾಕ್ ಮತ್ತು ಆರೋಗ್ಯ ಖಾತೆ ಕಾರ್ಯದರ್ಶಿ ಸಾಜಿದ್ ಜಾವಿದ್ ಸೇರಿದಂತೆ ಕನ್ಸರ್ವೇಟಿವ್ ಪಕ್ಷದ 8 ಸಚಿವರು ಹಾಗೂ ಸಂಸದರು ರಾಜೀನಾಮೆ ನೀಡಿದ್ದರು. ಹೀಗಾಗಿ, ಬ್ರಿಟನ್ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಇದರ ಬೆನ್ನಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೆ ಪ್ರಧಾನಿ ಹುದ್ದೆಯ ಉಸ್ತುವಾರಿ ನೋಡಿಕೊಳ್ಳುವ ಸಾಧ್ಯತೆ ಇದೆ. ಅಥವಾ ಹೊಸ ಪ್ರಧಾನಿ ಆಯ್ಕೆ ಪ್ರಕ್ರಿಯೆ ನಡೆಯಬಹುದು. ಜಾನ್ಸನ್ ಸ್ಥಾನಕ್ಕೆ ಇರಾಕ್ ಸಂಜಾತ್ ನದೀಂ ಸ್ಪರ್ಧಿ ಎನ್ನಲಾಗ್ತಿದ್ದು, ರಿಷಿ ಸುನಕ್ ಸಹ ರೇಸ್ನಲ್ಲಿದ್ದಾರೆ.
ಲಂಡನ್ ಪ್ರಧಾನಿ ಅನೇಕ ಹಗರಣಗಳು ಹಾಗೂ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಔತಣಕೂಟ ಏರ್ಪಡಿಸಿದ್ದರು. ಇದು ಅವರಿಗೆ ಮುಳುವಾಗಿ ಪರಿಣಮಿಸಿದ್ದು, ಅನೇಕ ಸಂಸದರು ವಿರೋಧ ವ್ಯಕ್ತಪಡಿಸಿದ್ದರು. ಬಂಡಾಯದ ಬಿಸಿಯಿಂದ ಅಂತರ ಕಾಯ್ದುಕೊಂಡಿದ್ದ ಬೋರಿಸ್ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುವ ಪಣ ತೊಟ್ಟಿದ್ದರು. ಆದರೆ, ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಇದನ್ನೂ ಓದಿರಿ:ಯುಕೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿರುವ ಬೋರಿಸ್ ಜಾನ್ಸನ್.. ಅಕ್ಟೋಬರ್ವರೆಗೂ ಉಸ್ತುವಾರಿ