ವಾಷಿಂಗ್ಟನ್:ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಲ್ಲಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮೂರನೇ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಹಣ ಅಕ್ರಮ ವರ್ಗಾವಣೆ, ಸರ್ಕಾರಿ ದಾಖಲೆಗಳ ಅಕ್ರಮ ಕ್ರೋಢೀಕರಣ ಕ್ರಿಮಿನಲ್ ಕೇಸ್ ಬಳಿಕ ಶ್ವೇತಭವನದ ಮೇಲೆ ಬೆಂಬಲಿಗರ ಜೊತೆ ದಾಳಿ ವಿಷಯವಾಗಿ ಈಗ ಪ್ರಕರಣ ದಾಖಲಿಸಲಾಗಿದೆ. ಇದರ ವಿರುದ್ಧ ಟೀಕಿಸಿರುವ ಟ್ರಂಪ್, 'ನನ್ನನ್ನು ಅಧ್ಯಕ್ಷೀಯ ಚುನಾವಣೆಯಿಂದ ತಪ್ಪಿಸುವ ಪ್ರಯತ್ನ' ಎಂದು ಆರೋಪಿಸಿದ್ದಾರೆ.
ಅಧ್ಯಕ್ಷರಾಗಿ ನಿರ್ಗಮಿಸಿದ ಬಳಿಕ ಡೊನಾಲ್ಡ್ ಟ್ರಂಪ್ ಸರ್ಕಾರದ ರಹಸ್ಯ ದಾಖಲೆಗಳನ್ನು ಮರಳಿಸದೇ ತಮ್ಮ ನಿವಾಸದಲ್ಲಿ ಇಟ್ಟುಕೊಂಡಿದ್ದರು. ಈ ಬಗ್ಗೆ ತನಿಖೆ ಈಗಿನ ಜೋ ಬೈಡನ್ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಿದೆ. ಬಳಿಕ ಅಕ್ರಮ ಹಣ ವರ್ಗಾವಣೆಯಲ್ಲೂ ಕೇಸ್ ಜಡಿಯಲಾಗಿದೆ. ಎರಡೂ ವಿಷಯಗಳ ಮೇಲೆ ಕೇಸ್ ಜರುಗುತ್ತಿದೆ. ಈ ಮಧ್ಯೆ ಮತ್ತೊಂದು ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ತನ್ನ ವಿರುದ್ಧ ಪಿತೂರಿ;ಜೋ ಬೈಡನ್ ಸರ್ಕಾರ ತನ್ನ ವಿರುದ್ಧ ದ್ವೇಷ ಸಾಧಿಸುತ್ತಿದೆ. ಬೇಕಂತಲೇ ಪಿತೂರಿ ನಡೆಸುತ್ತಿದೆ. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಈ ತಂತ್ರ ರೂಪಿಸಲಾಗಿದೆ. ಇದೆಲ್ಲವನ್ನೂ ನಾನು ಎದುರಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ವಿರುದ್ಧದ ಕೇಸ್ಗಳ ಸ್ಥಿತಿಗತಿ: ರಹಸ್ಯ ದಾಖಲೆಗಳ ಕೇಸ್-ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಬಳಿಕ ತಮ್ಮ ನಿವಾಸದಲ್ಲಿ ಪರಮಾಣು ಘಟಕಗಳು ಸೇರಿದಂತೆ ಮಹತ್ವದ ಸರ್ಕಾರಿ ದಾಖಲೆಗಳನ್ನು ಇಟ್ಟುಕೊಂಡಿದ್ದರು. ಪೊಲೀಸ್ ತಪಾಸಣೆಯ ವೇಳೆ ಅವನ್ನು ಶೌಚಾಲಯ, ಕೋಣೆಗಳಲ್ಲಿ ಬಿಸಾಡಿದ್ದು ಕಂಡು ಬಂದಿತ್ತು. ಸುಳ್ಳು ಹೇಳಿಕೆ, ಅಕ್ರಮ ದಾಖಲೆಗಳ ಕ್ರೋಢೀಕರಣ ಸಂಬಂಧ ಕ್ರಿಮಿನಲ್ ಕೇಸ್ ಹಾಕಲಾಗಿದ್ದು, ಹಲವು ಬಾರಿ ವಿಚಾರಣೆಗೆ ಒಳಗಾಗಿದ್ದಾರೆ. ಇದರಲ್ಲಿ ಆರೋಪ ಸಾಬೀತಾದರೆ, 20 ವರ್ಷಗಳವರೆಗೆ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.