ಕರ್ನಾಟಕ

karnataka

ETV Bharat / international

ಇಸ್ರೇಲ್ ಮೇಲೆ ಹಮಾಸ್​ ಉಗ್ರರಿಗೇಕೆ ಇಷ್ಟೊಂದು ದ್ವೇಷ? ಸಂಘರ್ಷದ ಹಿಂದಿನ ಕಹಾನಿ.. - ಯಹೂದಿ

ಇಸ್ರೇಲ್​ ಮತ್ತು ಪ್ಯಾಲೆಸ್ಟೀನ್​ ನಡುವೆ 1970ಕ್ಕೂ ಹಿಂದಿನಿಂದಲೇ ಯುದ್ದ, ಮನಸ್ತಾಪಗಳಿವೆ. ಇದರ ಹೊಸ ಬೆಳವಣಿಗೆಯೇ ನಿನ್ನೆ ಆರಂಭವಾದ ಮಹಾ ಕದನ!.

ಯಹೂದಿ-ಪ್ಯಾಲೆಸ್ಟೀನ್
ಯಹೂದಿ-ಪ್ಯಾಲೆಸ್ಟೀನ್ ಯುದ್ಧ

By ETV Bharat Karnataka Team

Published : Oct 8, 2023, 1:17 PM IST

ಜೆರುಸಲೇಂ (ಇಸ್ರೇಲ್) : ಯಾವುದೇ ಸುಳಿವು ನೀಡದೇ ಪ್ಯಾಲೆಸ್ಟೀನ್‌ನ ಹಮಾಸ್ ಉಗ್ರರು ಶನಿವಾರ ಇಸ್ರೇಲ್ ಮೇಲೆ ಭೀಕರ ಸ್ವರೂಪದ ದಾಳಿ ಮಾಡಿದ್ದರು. ಇಸ್ರೇಲ್‌ನ ದಕ್ಷಿಣ ದಿಕ್ಕಿನಲ್ಲಿರುವ ಲಕ್ಷಾಂತರ ನಾಗರಿಕರು ಈ ಉಗ್ರರು ಹಾರಿಸಿದ ನೂರಾರು ರಾಕೆಟ್‌ಗಳ ಸದ್ದಿಗೆ ಕಂಗಾಲಾದರು. ವಾಯುದಾಳಿಯ ಸೈರನ್‌ಗಳು ಉತ್ತರದ ಟೆಲ್ ಅವೀವ್‌ನವರೆಗೂ ಕೇಳಿಸಿತ್ತು.

ಶಸ್ತ್ರಸಜ್ಜಿತ ಭಯೋತ್ಪಾದಕರು ಇಸ್ರೇಲ್‌ನ ಅತ್ಯಂತ ಭದ್ರ ಪ್ರದೇಶವನ್ನೂ ಸ್ಫೋಟಿಸಿದರು. ಸಮಯ ಕಳೆದಂತೆ ದಾಳಿಯಿಂದ ಸಾವಿನ ಸಂಖ್ಯೆ ಏರುತ್ತಲೇ ಹೋಯಿತು. ಇಸ್ರೇಲ್​ ಅಧಿಕಾರಿಗಳು ಟೈಮ್ಸ್ ಆಫ್ ಇಸ್ರೇಲ್‌ ಪತ್ರಿಕೆಗೆ ನೀಡಿದ ಮಾಹಿತಿಯಂತೆ, ಅಂದಾಜು 1,590ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡರು. ನೂರಾರು ಮಂದಿ ಪ್ರಾಣ ಕಳೆದುಕೊಂಡರು.

1) ಇಸ್ರೇಲ್​ನ ಭದ್ರತಾ ವೈಫಲ್ಯ :ಇಸ್ರೇಲ್​​ ಮೇಲಾದ ರಣಭೀಕರ ದಾಳಿಯು 1973 ರಲ್ಲಿ ಮಧ್ಯಪ್ರಾಚ್ಯ ಯುದ್ಧವನ್ನು ಮತ್ತೆ ನೆನಪಿಸಿತು. 50 ವರ್ಷಗಳ ಹಿಂದೆ ಈಜಿಪ್ಟ್-ಸಿರಿಯನ್​ ಒಕ್ಕೂಟವು ಇಸ್ರೇಲ್​ ಮೇಲೆ ಇದೇ ರೀತಿಯ ದಾಳಿ ಮಾಡಿತ್ತು. ಆಗ ಇಸ್ರೇಲ್​ ಮಿಲಿಟರಿಗೆ ಈ ದಾಳಿ ದೊಡ್ಡ ಆಘಾತವನ್ನೇ ನೀಡಿತ್ತು. ಈ ಘಟನೆಯ ನಂತರ, ಇಷ್ಟು ವರ್ಷ ಕಳೆದ ಮೇಲೂ ಹಮಾಸ್​ ಏಕಾಏಕಿ ನಡೆಸುವ ದಾಳಿ ಬಗ್ಗೆ ಸುಳಿವೇ ಇಲ್ಲದಷ್ಟು ಇಸ್ರೇಲ್​ ಹಿಂದುಳಿಯಿತು.

ಹಾಗಾದರೆ, ಹಮಾಸ್​ ಹೇಗೆ ಈ ಮಟ್ಟಿಗೆ ವೈಮಾನಿಕ ದಾಳಿ ನಡೆಸಲು ಸಾಧ್ಯವಾಯಿತು? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ರಾಜಕೀಯ ವಿಶ್ಲೇಷಕರು ವೈಫಲ್ಯಕ್ಕಾಗಿ ಬೆಂಜಮಿನ್ ನೆತನ್ಯಾಹುರನ್ನು ಟೀಕಿಸಲು ಆರಂಭಿಸಿದ್ದಾರೆ. ಒಂದೆಡೆ ಯುದ್ಧ ವೈಫಲ್ಯ ಮತ್ತೊಂದೆಡೆ ಸಾವು-ನೋವುಗಳ ಸಂಖ್ಯೆ ಏರುತ್ತಲೇ ಇದೆ. ಪರಿಣಾಮ ನೆತನ್ಯಾಹು ತನ್ನ ಸರ್ಕಾರ ಮತ್ತು ದೇಶದ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

2) ಒಳನುಸುಳುವಿಕೆ : ಹಮಾಸ್ ಸಂಘಟನೆ ಹಲವಾರು ಇಸ್ರೇಲಿಗಳನ್ನು ಸೆರೆಹಿಡಿದಿದ್ದು ಒತ್ತೆಯಾಳಾಗಿ ಇರಿಸಿಕೊಂಡಿದೆ. ಈ ಉಗ್ರರು ಇಸ್ರೇಲ್​ ಸೈನಿಕರನ್ನು ಎಳೆದುಕೊಂಡು ಹೋಗಿದ್ದು, ಅವರ ಮೃತದೇಹಗಳ ಮೇಲೆ ನಿಂತಿರುವ ಭೀಕರ ವೀಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. ಹೀಗೆ ಸೆರೆಯಾದವರಲ್ಲಿ ಹಿರಿಯ ಇಸ್ರೇಲಿ ಸೇನಾ ಅಧಿಕಾರಿಗಳೂ ಇದ್ದಾರೆ ಎಂದು ಹಮಾಸ್​ ಹೇಳಿದೆ. ಇದಕ್ಕೂ ಮುನ್ನ ಯಾವುದೇ ಭಯವಿಲ್ಲದ ಹಮಾಸ್​ 2006ರಲ್ಲಿ ಸೈನಿಕ ಗಿಲಾಡ್ ಶಾಲಿತ್‌ನನ್ನು ಎಂಬವನನ್ನು ಗಡಿಯಾಚೆಗಿನ ದಾಳಿಯಲ್ಲಿ ವಶಪಡಿಸಿಕೊಂಡಿದ್ದರು. ಈ ಮೂಲಕ 1,000 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡುವಂತೆ ಬೇಡಿಕೆಯೊಡ್ಡಿತ್ತು.

ಈ ವಿನಿಮಯ ಒಪ್ಪಂದಕ್ಕಾಗಿ ಹಮಾಸ್ ಐದು ವರ್ಷಗಳ ಕಾಲ ಶಾಲಿತ್‌ನನ್ನು ತಮ್ಮ ವಶದಲ್ಲಿಯೇ ಇಟ್ಟುಕೊಂಡಿತ್ತು. ಇಸ್ರೇಲ್​ ದೇಶದೊಳಗೆ ಹಮಾಸ್ ಪ್ಯಾರಾಗ್ಲೈಡರ್‌ಗಳನ್ನು ಸಹ ಕಳುಹಿಸಿತ್ತು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. 1980ರ ದಶಕದ ಉತ್ತರಾರ್ಧದಲ್ಲಿ ಪ್ಯಾಲೆಸ್ಟೀನಿಯನ್ ಉಗ್ರಗಾಮಿಗಳು ಲೆಬನಾನ್‌ನಿಂದ ಉತ್ತರ ಇಸ್ರೇಲ್‌ಗೆ ಹ್ಯಾಂಗ್-ಗ್ಲೈಡರ್‌ಗಳ ಮೂಲಕ ಹಾರಿದ್ದ ಆರು ಇಸ್ರೇಲಿ ಸೈನಿಕರನ್ನು ಕೊಂದಿತ್ತು. ಗಡಿ ಭಾಗ ಗಾಜಾದಲ್ಲಿ ಹಮಾಸ್​ ಇಸ್ರೇಲ್​ ಸೈನಿಕರನ್ನು ಮತ್ತು ನಾಗರಿಕರನ್ನು ಒತ್ತೆಯಾಳಾಗಿಸಿಕೊಳ್ಳುತ್ತಿದೆ ಎಂದು ಇಸ್ರೇಲಿ ಸೈನ್ಯವು ತಡವಾಗಿ ದೃಢಪಡಿಸಿತ್ತು. ಆದರೆ ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿತು.

3) ಅಲ್-ಅಕ್ಸಾ ಮಸೀದಿಗಾಗಿ ಮನಸ್ತಾಪ: ಮುಸ್ಲಿಮರು ಮತ್ತು ಯಹೂದಿಗಳಿಬ್ಬರಿಗೂ ಅಲ್-ಅಕ್ಸಾ ಮಸೀದಿ ತುಂಬಾ ಪವಿತ್ರ. ಆದರೆ ಈ ಮಸೀದಿ ವಿಚಾರದಲ್ಲೂ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ವಿವಾದ, ಉದ್ವಿಗ್ನತೆ ದೀರ್ಘಕಾಲದಿಂದಲೂ ಇದೆ. 2021ರಲ್ಲಿ ಟೆಂಪಲ್ ಮೌಂಟ್ ಎಂದು ಕರೆಯಲ್ಪಡುವ ಈ ಅಲ್-ಅಕ್ಸಾ ಮಸೀದಿ ಕುರಿತಾದ ಹಕ್ಕುಗಳಿಗೆ ಇಬ್ಬರ ನಡುವೆ ರಕ್ತಸಿಕ್ತ 11 ದಿನಗಳ ಯುದ್ಧ ನಡೆದಿತ್ತು. ಅಲ್-ಅಕ್ಸಾ ಮಸೀದಿ ಇಸ್ರೇಲ್​ನ ಜೆರುಸಲೇಂನಲ್ಲಿದೆ.

ಇತ್ತೀಚೆಗೆ ಪ್ಯಾಲೇಸ್ಟೀನಿಗಳು ಇಲ್ಲಿ ನಿಯೋಜಿಲ್ಪಟ್ಟಿದ್ದ ಇಸ್ರೇಲ್​ನ ಪೊಲೀಸ್​ ಅಧಿಕಾರಿಗಳ ಮೇಲೆ ಹಿಂಸಾಚಾರವೆಸಗಿದ್ದರು. ಹಮಾಸ್​ ಉಗ್ರರಿಗೆ ಮೆಕ್ಕಾ, ಮದೀನಾ ಬಳಿಕ ಜೆರುಸಲೇಂನ ಅಲ್-ಅಕ್ಸಾ ಮಸೀದಿಯೇ ಪವಿತ್ರವಾದುದು. ಹೀಗಾಗಿ ಮಸೀದಿ ಯುದ್ಧಕ್ಕೆ ಕಾರಣವಾಗಿದೆ. ಯಹೂದಿಗಳು ನಮ್ಮ ಒಪ್ಪಂದವನ್ನು ಉಲ್ಲಂಘಿಸಿ ನಮ್ಮ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಪ್ಯಾಲೆಸ್ಟೀನ್​​ ಮಾಡುತ್ತಲೇ ಇದೆ. 2007ರಲ್ಲಿ ಉಗ್ರಗಾಮಿ ಗುಂಪು ಹಮಾಸ್​ ಗಾಜಾವನ್ನು ತನ್ನ ವಶಕ್ಕೆ ಪಡೆದಕೊಂಡಿತು. ಇದರ ಪರಿಣಾಮ ಇಸ್ರೇಲ್ ಮತ್ತು ಹಮಾಸ್ ನಾಲ್ಕು ಯುದ್ಧಗಳನ್ನು ನಡೆಸಿದೆ.

ಇದನ್ನೂ ಓದಿ:ಇಸ್ರೇಲ್ ಮೇಲೆ ಹಮಾಸ್ ಉಗ್ರರ ಅಟ್ಟಹಾಸ: ಮೃತರ ಸಂಖ್ಯೆ 300ಕ್ಕೆ ಏರಿಕೆ

ABOUT THE AUTHOR

...view details