ಕೊಲಂಬೊ : ಶ್ರೀಲಂಕಾ ಈ ವರ್ಷದ ನವೆಂಬರ್ವರೆಗೆ ಪ್ರವಾಸೋದ್ಯಮದಿಂದ 1.8 ಶತಕೋಟಿ ಡಾಲರ್ ಆದಾಯ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ದೇಶದ ಪ್ರವಾಸೋದ್ಯಮ ಆದಾಯ ಶೇ 78.3ರಷ್ಟು ಹೆಚ್ಚಳವಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಶ್ರೀಲಂಕಾ (ಸಿಬಿಎಸ್ಎಲ್) ಅಂಕಿಅಂಶಗಳು ತಿಳಿಸಿವೆ. ಪ್ರವಾಸೋದ್ಯಮದಿಂದ ದೇಶಕ್ಕೆ ಬಂದ ಆದಾಯ 2023 ರ ನವೆಂಬರ್ನಲ್ಲಿ 205.3 ಮಿಲಿಯನ್ ಡಾಲರ್ನಷ್ಟು ಹೆಚ್ಚಾಗಿದ್ದು, ಇದು 2022 ರ ನವೆಂಬರ್ನಲ್ಲಿ ಬಂದಿದ್ದ ಆದಾಯಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
2024 ರಲ್ಲಿ ಮತ್ತಷ್ಟು ವಿಮಾನಯಾನ ಸಂಸ್ಥೆಗಳು ದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ್ದರಿಂದ ಪ್ರವಾಸಿಗರ ಆಗಮನ ಹೆಚ್ಚಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಗುರುವಾರ ಸಂಸತ್ತಿಗೆ ತಿಳಿಸಿದ್ದಾರೆ. ಶ್ರೀಲಂಕಾಗೆ ನವೆಂಬರ್ ಒಂದೇ ತಿಂಗಳಲ್ಲಿ 1,51,496 ಅಂತರರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು 2023 ರ ಅತಿ ಹೆಚ್ಚು ಮಾಸಿಕ ಪ್ರವಾಸಿಗರ ಸಂಖ್ಯೆಯಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ಹೇಳಿವೆ.
ಶ್ರೀಲಂಕಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ವರ್ಷದ ಮೊದಲ 11 ತಿಂಗಳಲ್ಲಿ ಶ್ರೀಲಂಕಾಗೆ ಒಟ್ಟು 1.27 ಮಿಲಿಯನ್ ಪ್ರವಾಸಿಗರು ಬೇಟಿ ನೀಡಿದ್ದಾರೆ.
ಪ್ರವಾಸೋದ್ಯಮವು ಶ್ರೀಲಂಕಾದ ವಿದೇಶಿ ಆದಾಯದ ಪ್ರಮುಖ ಮೂಲವಾಗಿದೆ. ಮುಂಬರುವ ಋತುವಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ದೇಶಕ್ಕೆ ಬರುವ ಚೀನಾ, ಭಾರತ, ಇಂಡೋನೇಷ್ಯಾ, ರಷ್ಯಾ, ಥೈಲ್ಯಾಂಡ್, ಮಲೇಷ್ಯಾ ಮತ್ತು ಜಪಾನ್ ಪ್ರಜೆಗಳಿಗೆ ವೀಸಾ ಶುಲ್ಕವನ್ನು ಸರ್ಕಾರ ಮನ್ನಾ ಮಾಡಿದೆ. ಈ ದೇಶಗಳಿಗೆ ವೀಸಾ ಮುಕ್ತ ಪ್ರಯಾಣವನ್ನು ಮಾರ್ಚ್ 31, 2024 ರವರೆಗೆ ಪ್ರಾಯೋಗಿಕ ಯೋಜನೆಯಾಗಿ ಕೈಗೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ದೇಶಗಳ ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡಿದಾಗ ಶುಲ್ಕವಿಲ್ಲದೆ ವೀಸಾ ಪಡೆಯಬಹುದು. ಭಾರತವು ಸಾಂಪ್ರದಾಯಿಕವಾಗಿ ಶ್ರೀಲಂಕಾದ ಉನ್ನತ ಪ್ರವಾಸೋದ್ಯಮ ಮಾರುಕಟ್ಟೆಯಾಗಿದೆ. ಸೆಪ್ಟೆಂಬರ್ 2023 ರಲ್ಲಿ 30,000 ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ನೆರೆಯ ದೇಶಕ್ಕೆ ಭೇಟಿ ನೀಡಿದ್ದಾರೆ. 2019 ರ ಈಸ್ಟರ್ ಸಂಡೇ ಬಾಂಬ್ ಸ್ಫೋಟದ ನಂತರ ದ್ವೀಪ ರಾಷ್ಟ್ರ ಶ್ರೀಲಂಕಾಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಈ ಬಾಂಬ್ ಸ್ಪೋಟದಲ್ಲಿ 11 ಭಾರತೀಯರು ಸೇರಿದಂತೆ 270 ಜನ ಬಲಿಯಾಗಿದ್ದರು ಮತ್ತು 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಇದನ್ನೂ ಓದಿ : ಯುಎಸ್ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆ; ಬೈಡೆನ್ಗಿಂತ ಟ್ರಂಪ್ 4 ಅಂಕ ಮುನ್ನಡೆ