ಕೀವ್, ಉಕ್ರೇನ್ :ರಷ್ಯಾ ಆಕ್ರಮಣದಿಂದ ಉಕ್ರೇನ್ ತತ್ತರಿಸಿದೆ. ದಿನನಿತ್ಯ ಉಕ್ರೇನ್ ಮೇಲೆ ಬಾಂಬ್‌ಗಳ ಸುರಿಮಳೆಯಾಗುತ್ತಿದೆ. ಈವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಉಕ್ರೇನ್ ತೊರೆದಿದ್ದಾರೆ. ಫೆಬ್ರವರಿ 24ರಂದು ಯುದ್ಧ ಪ್ರಾರಂಭವಾದಾಗಿನಿಂದ 5,264 ಮಂದಿ ನಾಗರಿಕರು ಸಾವನ್ನಪ್ಪಿರುವುದಾಗಿ ಅಂದಾಜಿಸಲಾಗಿದೆ. 58 ದಿನಗಳಿಂದ ಉಕ್ರೇನ್ ಯುದ್ಧದ ಬೆಂಕಿಯಲ್ಲಿ ಬೇಯುತ್ತಿದ್ದು, ಕೀವ್ ಹೊರವಲಯದ ಉಪನಗರ ಬುಚಾದಲ್ಲಿ ಸಾಮೂಹಿಕ ಸಮಾಧಿಗಳು ಪತ್ತೆಯಾಗಿರುವುದು ಯುದ್ಧದ ತೀವ್ರತೆ ಬಿಂಬಿಸುತ್ತಿದೆ.
ಮ್ಯಾಕ್ಸರ್ ಟೆಕ್ನಾಲಜಿಸ್ ಉಪಗ್ರಹ ಈ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಮರಿಯುಪೊಲ್ ನಗರ ಹೊರವಲಯದ ಮ್ಯಾನ್‌ಹುಶ್ ಪಟ್ಟಣದಲ್ಲಿರುವ ಸ್ಮಶಾನದಿಂದ ಸ್ವಲ್ಪ ದೂರದಲ್ಲಿ 200ಕ್ಕೂ ಹೆಚ್ಚು ಸಾಮೂಹಿಕ ಸಮಾಧಿಗಳು ಪತ್ತೆಯಾಗಿದ್ದು, ರಷ್ಯಾ ಸೈನಿಕರ ಕ್ರೂರತ್ವಕ್ಕೆ ಸಾಕ್ಷಿಯನ್ನು ಒದಗಿಸುತ್ತವೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಉಕ್ರೇನ್ ಅಧಿಕಾರಿಗಳ ಪ್ರಕಾರ ರಷ್ಯಾ ಪಡೆಗಳು ಮರಿಯುಪೊಲ್‌ನ ಸುಮಾರು 9 ಸಾವಿರ ನಾಗರಿಕರನ್ನು ಕೊಂದು ನಂತರ ಮ್ಯಾನ್‌ಹುಶ್ ಪಟ್ಟಣದ ಸಮೀಪದಲ್ಲಿ ಸಾಮೂಹಿಕ ಸಮಾಧಿ ಮಾಡಿದ್ದಾರೆ. ಮರಿಯುಪೋಲ್ ಬಂದರು ನಗರವಾಗಿದ್ದು, ಅಲ್ಲಿ ನಡೆಯುತ್ತಿರುವ ನರಮೇಧವನ್ನು ಮರೆ ಮಾಚಲು ಶವಗಳನ್ನು ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗಿದೆ ಎನ್ನಲಾಗಿದೆ.