ಇಸ್ಲಾಮಾಬಾದ್, ಪಾಕಿಸ್ತಾನ: ಹಣದುಬ್ಬರ ಮತ್ತೊಮ್ಮೆ ಪಾಕಿಸ್ತಾನದ ಜನತೆಗೆ ಬಿಸಿ ಮುಟ್ಟಿಸಿದೆ. ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಹಣದುಬ್ಬರ ಏರಿಕೆ ಮಾತ್ರ ನಿಂತಿಲ್ಲ. ಸರ್ಕಾರ ಶುಕ್ರವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 26.2 ರೂ. ಮತ್ತು ಹೈ ಸ್ಪೀಡ್ ಡೀಸೆಲ್ (ಎಚ್‌ಎಸ್‌ಡಿ) ಬೆಲೆಯನ್ನು ಲೀಟರ್‌ಗೆ 17.34 ರೂ.ಗಳಷ್ಟು ಹೆಚ್ಚಿಸಿದೆ. 'ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಬೆಲೆ ಏರಿಕೆಯಾಗುತ್ತಿರುವ ಕಾರಣ, ಗ್ರಾಹಕರಿಗೆ ಈಗಿರುವ ಬೆಲೆಗಳನ್ನು ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದೆ' ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಬೆಲೆ ಏರಿಕೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಐತಿಹಾಸಿಕ ಮಟ್ಟಕ್ಕೆ ತುಲುಪಿವೆ. ಬೆಲೆ ಏರಿಕೆಯ ನಂತರ ಪೆಟ್ರೋಲ್ ಬೆಲೆ ಲೀಟರ್‌ಗೆ 331.38 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 329.18 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಈ ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 15-16 ರ ಮಧ್ಯರಾತ್ರಿಯ ನಂತರದಿಂದಲೇ ಜಾರಿಗೆ ಬಂದಿವೆ. ಕೆಲವು ದಿನಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಹಂಗಾಮಿ ಸರ್ಕಾರ ಅನುಮೋದನೆ ನೀಡಿತ್ತು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಧನದ ಬೆಲೆ 300 ರೂಪಾಯಿ ಗಡಿ ದಾಟಿದೆ.
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅವರ ಪಕ್ಷ ಪಿಟಿಐ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಅವರು, ಹಳೆಯ ಪಾಕಿಸ್ತಾನಕ್ಕೆ ಸ್ವಾಗತ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದ ನಾಗರಿಕರಿಗೆ ಇದು ಹೊಸ ಹೊರೆಯಾಗಿದೆ. ಹಣದುಬ್ಬರ, ಡಾಲರ್ ಬೆಲೆ ಏರಿಕೆ, ದುಬಾರಿ ವಿದ್ಯುತ್ ಬಿಲ್ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಪಾಕಿಸ್ತಾನದ ಜನರು ಈಗಾಗಲೇ ತೊಂದರೆಗೀಡಾಗಿದ್ದಾರೆ. ಪಾಕಿಸ್ತಾನದಲ್ಲಿ ಸೀಮೆಎಣ್ಣೆ ಮತ್ತು ಲೈಟ್ ಡೀಸೆಲ್ ಆಯಿಲ್ (ಎಲ್‌ಡಿಒ) ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಇಲ್ಲಿನ ಜನರು ವಾಹನ ಮತ್ತು ಕೃಷಿಗೆ ಡೀಸೆಲ್ ಬಳಸಿದ್ರೆ, ಅಡುಗೆಗೆ ಸೀಮೆಎಣ್ಣೆ ಬಳಸುತ್ತಿದ್ದಾರೆ. ಪಾಕಿಸ್ತಾನದ ಸೇನೆಯು ಸಹ ಸೀಮೆಎಣ್ಣೆಯನ್ನು ವ್ಯಾಪಕವಾಗಿ ಬಳಸುತ್ತದೆ ಎಂದು ವಿಡಿಯೋದಲ್ಲಿ ಹೇಳುವ ಮೂಲಕ ಆರೋಪಿಸಿದ್ದಾರೆ.
ಈ ವರ್ಷ ಪಾಕಿಸ್ತಾನದಲ್ಲಿ ನಿರುದ್ಯೋಗಿಗಳ ಸಂಖ್ಯೆ 56 ಲಕ್ಷಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್ಒ) ವರದಿ ಪ್ರಕಾರ, ಕೋವಿಡ್ ನಂತರ ಪಾಕಿಸ್ತಾನದ ಕಾರ್ಮಿಕ ಮಾರುಕಟ್ಟೆ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಮಹಿಳೆಯರ ನಿರುದ್ಯೋಗ ದರವು 11.1 ಪ್ರತಿಶತ ಎಂದು ಅಂದಾಜಿಸಲಾಗಿದೆ.
ಓದಿ:Explained: ಸೌದಿ ಅರೇಬಿಯಾ, ರಷ್ಯಾದಿಂದ ಕಚ್ಚಾ ತೈಲ ಉತ್ಪಾದನೆ ಕಡಿತ... ಭಾರತದ ಮೇಲೆ ಆಗುವ ಪರಿಣಾಮಗಳೇನು?