ವಾಷಿಂಗ್ಟನ್(ಅಮೆರಿಕ):ವಿಮಾನಯಾನ ಕ್ಷೇತ್ರದಲ್ಲಿ ಅಮೆರಿಕದ ತಾಯಿ ಮತ್ತು ಮಗಳು ಒಟ್ಟಿಗೆ ವಿಮಾನ ಹಾರಾಟ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದರು. ಕ್ಯಾಪ್ಟನ್ ಹಾಲಿ ಪೆಟಿಟ್ ಮತ್ತು ಫಸ್ಟ್ ಆಫೀಸರ್ ಕೆಲ್ಲಿ ಪೆಟಿಟ್ ಅವರು ಏರ್‌ಲೈನ್ಸ್ ಇತಿಹಾಸದಲ್ಲಿಯೇ 'ಪೈಲಟ್ ಸೀಟಿನಲ್ಲಿ ಕುಳಿತ ಮೊದಲ ತಾಯಿ-ಮಗಳು ಜೋಡಿ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಳೆದ ಜುಲೈ 23ರಂದು ತಾಯಿ ಹಾಲಿ ಪೆಟಿಟ್ ಹಾಗೂ ಮಗಳು ಕೆಲ್ಲಿ ಪೆಟಿಟ್ ಪೈಲಟ್ ಆಗಿ ಅಮೆರಿಕದ ಡೆನ್ವರ್‌ನಿಂದ ಸೇಂಟ್ ಲೂಯಿಸ್‌ಗೆ ಸೌತ್‌ವೆಸ್ಟ್ ಏರ್‌ಲೈನ್ಸ್‌ನ ವಿಮಾನ ಹಾರಾಟ ಮಾಡಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಈ ವಿಡಿಯೋದಲ್ಲಿ ತಾಯಿ ಹಾಲಿ ಪೆಟಿಟ್ ಮಾತನಾಡಿದ್ದು, "ಇಂದು ನಮಗೆ ಮತ್ತು ಸೌತ್‌ವೆಸ್ಟ್ ಏರ್‌ಲೈನ್ಸ್‌ಗೆ ರೋಮಾಂಚಕಾರಿ ಹಾಗೂ ಬಹಳ ವಿಶೇಷವಾದ ದಿನ. ಸೌತ್‌ವೆಸ್ಟ್ ಏರ್‌ಲೈನ್ಸ್‌ನ ಫ್ಲೈಟ್ ಡೆಕ್‌ನಲ್ಲಿ ನಾವು ಮೊದಲ ತಾಯಿ-ಮಗಳು ಪೈಲಟ್ ಜೋಡಿಯಾಗಿದ್ದೇವೆ" ಎಂದು ಸಂತಸ ವ್ಯಕ್ತಪಡಿಸಿದರು.