ಇಸ್ಲಾಮಾಬಾದ್:ಕಳೆದ ಶನಿವಾರ ಸಂಭವಿಸಿದ 6.3 ತೀವ್ರತೆಯ ಸರಣಿ ಭೂಕಂಪದಲ್ಲಿ ಸಾವನ್ನಪ್ಪಿದ ಮೃತರಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಮಕ್ಕಳು ಮತ್ತು ಮಹಿಳೆಯರೇ ಆಗಿದ್ದಾರೆಂದು ವಿಶ್ವಸಂಸ್ಥೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಹೆರಾತ್ ಪ್ರಾಂತ್ಯದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ 2000 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ತಿಳಿಸಿದಿದ್ದಾರೆ. ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ 1,294 ಜನರು ಸಾವನ್ನಪ್ಪಿದ್ದು, 1688 ಜನರು ಗಾಯಗೊಂಡಿದ್ದಾರೆ. ಅಲ್ಲಿನ ಪ್ರತಿ ಒಂದು ಮನೆಯೂ ನಾಶವಾಗಿದೆ. ಇಲ್ಲಿನ ಝೆಂಡಾ ಜಾನ್ ಜಿಲ್ಲೆ ಭೂಕಂಪನದ ಕೇಂದ್ರಬಿಂದುವಾಗಿತ್ತು.
ಬೆಳಗ್ಗೆ ಭೂಕಂಪ ಸಂಭವಿಸಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಈ ಹೊತ್ತಿನಲ್ಲಿ ಮನೆಯಲ್ಲಿದ್ದರು. ಮೊದಲ ಭೂಕಂಪನ ಸಂಭವಿಸಿದಾಗ ಜನರೆಲ್ಲ ಅದನ್ನು ಸ್ಫೋಟ ಎಂದು ಭಾವಿಸಿದರು. ಇದರಿಂದ ಎಲ್ಲರೂ ತಮ್ಮ ತಮ್ಮ ಮನೆಗೆ ಓಡಿ ಹೋದರು ಎಂದು ಹೆರಾತ್‌ನಲ್ಲಿರುವ ಯುನಿಸೆಫ್ ಕ್ಷೇತ್ರ ಕಚೇರಿಯ ಮುಖ್ಯಸ್ಥ ಸಿದ್ದಿಗ್ ಇಬ್ರಾಹಿಂ ಹೇಳಿದ್ದಾರೆ. ಝೆಂಡಾ ಜಾನ್ ಜಿಲ್ಲೆಯಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದು, ಇದರಲ್ಲಿ ಮಹಿಳೆಯರು ಹೆಚ್ಚಾಗಿ ಒಳಗಾಗಿದ್ದಾರೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಅಫ್ಘಾನಿಸ್ತಾನದ ಪ್ರತಿನಿಧಿ ಜೈಮ್ ನಡಾಲ್ ಪ್ರಕಾರ ರಾತ್ರಿ ಭೂಕಂಪ ಸಂಭವಿಸಿದ್ದರೆ ಸಾವಿನ ಸಂಖ್ಯೆಗೆ ಲೆಕ್ಕವೇ ಇರುತ್ತಿರಲಿಲ್ಲ ಎಂದಿದ್ದಾರೆ. ಹಗಲಿನ ಸಮಯದಲ್ಲಿ ಅನೇಕ ಪುರುಷರು ಕೆಲಸಕ್ಕಾಗಿ ಇರಾನ್‌ಗೆ ವಲಸೆ ಹೋಗುತ್ತಾರೆ. ಹೆಂಗಸರು ಮಾತ್ರ ಮನೆ ಕೆಲಸ ಮಾಡಿಕೊಂಡಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಹೀಗಾಗಿ ಎಲ್ಲ ಅವಶೇಷಗಳ ಅಡಿ ಸಿಲುಕಿ ಸತ್ತಿರುವುದು ಮಕ್ಕಳು ಮತ್ತು ಮಹಿಳೆಯರೇ ಅಧಿಕವಾಗಿದ್ದಾರೆ.