ಟೆಲ್ ಅವೀವ್( ಇಸ್ರೇಲ್): ಟೆಲ್ ಅವೀವ್ ಪೊಲೀಸರು ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ. ಜೊತೆಗೆ, ಆರು ಮಂದಿ ಗಾಯಗೊಂಡಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಇಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, "ಟೆಲ್ ಅವೀವ್ನಲ್ಲಿರುವ ಚಾರ್ಲ್ಸ್ ಕ್ಲೋರ್ ಪಾರ್ಕ್‌ನಲ್ಲಿ ಭಯೋತ್ಪಾದಕನೊಬ್ಬ ಜನರ ಮೇಲೆಯೇ ಕಾರನ್ನು ನುಗ್ಗಿಸಿದ್ದಾನೆ. ಈ ವೇಳೆ ಅಲ್ಲೇ ಹತ್ತಿರದಲ್ಲಿದ್ದ ಗ್ಯಾಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರು ಗದ್ದಲವನ್ನು ಕೇಳಿ, ಟೆಲ್ ಅವಿವ್ ಪುರಸಭೆಯ ಇನ್ಸ್‌ಪೆಕ್ಟರ್‌ಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರನ್ನು ನೋಡಿದ ಚಾಲಕ, ತನ್ನ ಬಳಿಯಿದ್ದ ಆಯುಧ ತೆಗದು ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದ. ಈ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಭಯೋತ್ಪಾದಕನಿಗೆ ಗುಂಡೇಟು ನೀಡಿದ್ದಾರೆ".
ಈ ಕುರಿತು ಪ್ರತಿಕ್ರಿಯೆ ನೀಡಿರುವ ಟೆಲ್ ಅವೀವ್ ಪೊಲೀಸ್ ಮುಖ್ಯಸ್ಥ ಅಮಿಚೈ ಎಶೆಡ್, "ಶಂಕಿತ ದಾಳಿಕೋರ ಪಾದಚಾರಿ ಪ್ರದೇಶದಲ್ಲಿ ಮನಬಂದಂತೆ ಕಾರು ಚಲಾಯಿಸಿದ್ದಾನೆ. ಪರಿಣಾಮ ಅನೇಕರು ಗಾಯಗೊಂಡಿದ್ದಾರೆ. ಆರೋಪಿಯು ಮೊದಲು ಜನಪ್ರಿಯ ಕಡಲತೀರದ ಉದ್ಯಾನದ ಬಳಿಯ ಜನರ ಗುಂಪಿನ ಮೇಲೆ ಡಿಕ್ಕಿ ಹೊಡೆದಿದ್ದಾನೆ. ದಾಳಿಕೋರನ ಉದ್ದೇಶ ಮತ್ತು ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದೇವೆ. ಜೊತೆಗೆ ಸಾಕ್ಷ್ಯಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಶಂಕಿತ ದಾಳಿಕೋರ ಇಸ್ರೇಲಿನ ಪಟ್ಟಣವಾದ ಕ್ಫರ್ ಖಾಸೆಮ್‌ನವನಾಗಿದ್ದು, ಟೆಲ್ ಅವಿವ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಜೊತೆಗೆ, ಇಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸುಮಾರು 30 ವರ್ಷದ ವ್ಯಕ್ತಿಯು ಬಲಿಯಾಗಿದ್ದು, ಈತ ಇಟಾಲಿಯನ್ ಸಂದರ್ಶಕ ಎಂದು ಹೇಳಲಾಗಿದೆ. ಉಳಿದಂತೆ ಗಾಯಗೊಂಡವರೆಲ್ಲರೂ ಪ್ರವಾಸಿಗರು ಎಂದು ತಿಳಿದುಬಂದಿದೆ.