ನವದೆಹಲಿ:ಜಿ-20 ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಭಾರತವು ಯುದ್ಧ ಪ್ರದೇಶದಲ್ಲಿ (ಉಕ್ರೇನ್ನಲ್ಲಿ) ಸಮಾಲೋಚನಾ ಪ್ರಕ್ರಿಯೆ ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಬಹುಪಕ್ಷೀಯ ಸಮುದಾಯವನ್ನು ಒಟ್ಟುಗೂಡಲು ಮುಖ್ಯವಾಗಿದೆ. ಭಾರತೀಯ ಅಧ್ಯಕ್ಷ ಸ್ಥಾನವು ಇದಕ್ಕೆ ಪೂರಕವಾಗಿ ಇನ್ನಷ್ಟು ಕಾರ್ಯ ಮಾಡಲಿದೆ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆಶಯ ವ್ಯಕ್ತಪಡಿಸಿದರು.
ಭಾರತ ಪ್ರವಾಸದ ನಿಮಿತ್ತ ಗುರುವಾರ ನವದೆಹಲಿಗೆ ಆಗಮಿಸಿರುವ ಇಟಲಿ ಪ್ರಧಾನಿ, ರಾಷ್ಟ್ರ ರಾಜಧಾನಿಯ ಹೈದರಾಬಾದ್ ಹೌಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಬಾಂಧವ್ಯ ಬೆಳೆಸಲು ಪರಸ್ಪರ ಬದ್ಧತೆಯೊಂದಿಗೆ ಮುಂದಕ್ಕೆ ಕೊಂಡೊಯ್ಯುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಉಭಯ ನಾಯಕರು ಚರ್ಚಿಸಿದ ವಿಷಯಗಳು ಯಾವವು?:ಉಭಯ ನಾಯಕರು ವಿವಿಧ ಕ್ಷೇತ್ರಗಳಲ್ಲಿ ಸಹಯೋಗವನ್ನು ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಒಗ್ಗಟ್ಟು ಗಾಢವಾಗಿಸುವ ಬಗ್ಗೆ ಚರ್ಚಿಸಲಾಗಿದೆ. ರಾಜಕೀಯ, ವ್ಯಾಪಾರ ಮತ್ತು ಆರ್ಥಿಕ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಇಂಧನ, ಆರೋಗ್ಯ, ಸಾಂಸ್ಕೃತಿಕ ಕ್ಷೇತ್ರಗಳ ಮಾತುಕತೆ ನಡೆದಿದೆ.
ಇಟಲಿ ಪ್ರಧಾನಿ ಹೇಳಿದ್ದೇನು?:ನಾವು ಈ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ಬಯಸಿದ್ದೇವೆ ಮತ್ತು ನಮ್ಮ ಪಾಲುದಾರಿಕೆ ಕಾರ್ಯತಂತ್ರವಾಗಿ ಪರಿವರ್ತಿಸಲು ನಾವು ನಿರ್ಧರಿಸಿದ್ದೇವೆ. ಏಕೆಂದರೆ ನಾವು ಬಹಳ ಗಟ್ಟಿಯಾದ ಸಂಬಂಧವನ್ನು ಹೊಂದಿದ್ದೇವೆ. ಜಿ-20 ಶೃಂಗಸಭೆಯು ನಮ್ಮ ಸಹಕಾರದ ಮೇಲೆ ಭಾರತದ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸಲು, ನಾವು ಒಟ್ಟಾಗಿ ಬಹಳಷ್ಟು ಕಾರ್ಯಗಳ ರೂಪಿಸಲು ಸಾಧ್ಯವಿದೆ ಎಂದು ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಪಾದಿಸಿದರು.
ಭಯೋತ್ಪಾದನೆ, ಪ್ರತ್ಯೇಕತೆಯ ವಿರುದ್ಧದ ಹೋರಾಟ:ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಇಟಲಿ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ. ಈ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ವಿವರವಾದ ಚರ್ಚೆ ನಡೆಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು, ನಾವು ಭಾರತ ಮತ್ತು ಇಟಲಿ ನಡುವೆ 'ಸ್ಟಾರ್ಟ್ ಅಪ್ ಸೇತುವೆ' ಸ್ಥಾಪನೆ ಘೋಷಿಸುತ್ತಿದ್ದೇವೆ. ಇದನ್ನು ನಾವು ಸ್ವಾಗತಿಸುತ್ತೇವೆ. ಉಭಯ ದೇಶಗಳು ಹೊಸ ಅಧ್ಯಾಯ ಪ್ರಾರಂಭಿಸುತ್ತಿರುವ ಮತ್ತೊಂದು ಕ್ಷೇತ್ರ ಇದಾಗಿದೆ ಎಂದರು.