ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಅಸ್ಥಿರವಾದ ಜಾಗತಿಕ ಆರ್ಥಿಕತೆಯ ಹೊರತಾಗಿಯೂ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಶೀಘ್ರದಲ್ಲೇ ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪಿಎಂ ಮೋದಿ ಮಂಗಳವಾರ ಬ್ರಿಕ್ಸ್ ಬಿಸಿನೆಸ್ ಫೋರಂ ನಾಯಕರ ಸಂವಾದದಲ್ಲಿ ಮಾತನಾಡಿ, ''ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ'' ಎಂದೂ ಹೇಳಿದರು. ''ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಹೊಂದಿದ್ದು, 100ಕ್ಕೂ ಹೆಚ್ಚು ಯುನಿಕಾರ್ನ್‌ಗಳಿವೆ. ಸರ್ಕಾರ ಕೈಗೊಂಡಿರುವ ಮಿಷನ್ ಮೋಡ್ ಸುಧಾರಣೆಗಳ ಪರಿಣಾಮ ವ್ಯಾಪಾರ ಸುಲಭತೆಯು (Ease of Doing Business) ಸುಧಾರಿಸಿದೆ'' ಎಂದು ತಿಳಿಸಿದರು.
''2009ರಲ್ಲಿ ಮೊದಲ ಬ್ರಿಕ್ಸ್ ಶೃಂಗಸಭೆ ನಡೆದಾಗ ಜಗತ್ತು ದೊಡ್ಡ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುತ್ತಿತ್ತು. ಅದೇ ಸಮಯದಲ್ಲಿ ವಿಶ್ವ ಆರ್ಥಿಕತೆಯ ಭರವಸೆಯ ಕಿರಣವಾಗಿ ಬ್ರಿಕ್ಸ್ ಹೊರಹೊಮ್ಮಿತ್ತು'' ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಬ್ರಿಕ್ಸ್ ಒಳಗೊಂಡಿದೆ. 2019ರ ನಂತರ ಮೊದಲ ಬಾರಿಗೆ ಶೃಂಗಸಭೆಯನ್ನು ಆಫ್ರಿಕಾದಲ್ಲಿ ನಡೆಯುತ್ತಿದ್ದು, ಆ ರಾಷ್ಟ್ರವು ಮೊದಲ ಶೃಂಗಸಭೆಯನ್ನು ಆಯೋಜಿಸಿದೆ.