ಪ್ಯಾರಿಸ್ (ಫ್ರಾನ್ಸ್): ರಕ್ಷಣಾ ಸಹಕಾರವು ಭಾರತ ಮತ್ತು ಫ್ರಾನ್ಸ್ ನಡುವಿನ ಬಾಂಧವ್ಯದ ಬಲವಾದ ಆಧಾರಸ್ತಂಭವಾಗಿದೆ ಮತ್ತು ಗಟ್ಟಿಯಾದ ನಂಬಿಕೆಯ ಸಂಕೇತವಾಗಿದೆ. ಉಭಯ ದೇಶಗಳು ಒಟ್ಟಾಗಿ ನಮ್ಮದು ಮಾತ್ರವಲ್ಲದೇ ಇತರ ಸ್ನೇಹಪರ ದೇಶಗಳ ಅವಶ್ಯಕತೆಗಳನ್ನು ಪೂರೈಸಲು ಬಯಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಫ್ರಾನ್ಸ್ಗೆ ಎರಡು ದಿನಗಳ ಪ್ರವಾಸಕ್ಕಾಗಿ ಭೇಟಿ ನೀಡಿದ್ದಾರೆ. ಇಂದು ಎಲಿಸೀ ಅರಮನೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಉಭಯ ನಾಯಕರು ಜಂಟಿ ಪತ್ರಿಕಾ ಹೇಳಿಕೆಗಳನ್ನು ನೀಡಿದರು.
ಪ್ರಧಾನಿ ಮೋದಿ ಮಾತನಾಡಿ, ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಕಳೆದ 25 ವರ್ಷಗಳ ಬಲವಾದ ಅಡಿಪಾಯದ ಮೇಲೆ ನಾವು ಮುಂಬರುವ 25 ವರ್ಷಗಳ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದ್ದೇವೆ. ಇದಕ್ಕಾಗಿ ನಾವು ದಿಟ್ಟ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಹಾಕಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮ ರಕ್ಷಣಾ ಸಹಕಾರವು ಯಾವಾಗಲೂ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಮೂಲ ಸ್ತಂಭವಾಗಿದೆ. ಇದು ಉಭಯ ದೇಶಗಳ ನಡುವಿನ ಪರಸ್ಪರ ನಂಬಿಕೆಯ ಸಂಕೇತವೂ ಆಗಿದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್‌ನಲ್ಲಿ ಫ್ರಾನ್ಸ್ ಪ್ರಮುಖ ಪಾಲುದಾರ... ಅದು ಜಲಾಂತರ್ಗಾಮಿ ನೌಕೆಗಳು ಅಥವಾ ನೌಕಾ ವಿಮಾನಗಳು ಆಗಿರಬಹುದು. ಒಟ್ಟಾಗಿ ನಾವು ನಮ್ಮದು ಮಾತ್ರವಲ್ಲದೇ ಇತರ ಸ್ನೇಹ ದೇಶಗಳ ಅಗತ್ಯತೆಗಳನ್ನು ಪೂರೈಸಲು ಬಯಸುತ್ತೇವೆ ಎಂದು ಪ್ರಧಾನಿ ಹೇಳಿದರು.
ಕೋವಿಡ್ -19 ಸಾಂಕ್ರಾಮಿಕ ಮತ್ತು ಉಕ್ರೇನ್ ಸಂಘರ್ಷವು ಇಡೀ ಪ್ರಪಂಚದ ಮೇಲಿನ ಪರಿಣಾಮದ ಬಗ್ಗೆ ಉಲ್ಲೇಖಿಸಿದ ಮೋದಿ, ಜಾಗತಿಕ ದಕ್ಷಿಣದ ದೇಶಗಳು ವಿಶೇಷವಾಗಿ ಋಣಾತ್ಮಕ ಪರಿಣಾಮ ಬೀರಿವೆ. ಇದು ಕಳವಳಕಾರಿ ವಿಷಯವಾಗಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು, ದೇಶಗಳು ಒಗ್ಗಟ್ಟಿನಿಂದ ಪ್ರಯತ್ನಗಳನ್ನು ಮಾಡುವುದು ಮುಖ್ಯವಾಗಿದೆ. ಎಲ್ಲ ವಿವಾದಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ನಾವು ನಂಬುತ್ತೇವೆ. ಭಾರತ ಶಾಶ್ವತ ಶಾಂತಿಗೆ ಕೊಡುಗೆ ನೀಡಲು ಸಿದ್ಧವಾಗಿದೆ ಎಂದು ತಿಳಿಸಿದರು.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಫ್ರಾನ್ಸ್ ಒಟ್ಟಾಗಿವೆ. ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಬಲವಾದ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದೇ ನಾವು ನಂಬುತ್ತೇವೆ ಎಂದು ಮೋದಿ ಹೇಳಿದರು. ಇದೇ ವೇಳೆ, ಫ್ರಾನ್ಸ್‌ನಲ್ಲಿ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ ಅನ್ನು ಪ್ರಾರಂಭಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಭಾರತವು ಬಂದರು ಪಟ್ಟಣವಾದ ಮಾರ್ಸಿಲ್ಲೆಸ್‌ನಲ್ಲಿ ಹೊಸ ಕಾನ್ಸುಲೇಟ್ ಅನ್ನು ತೆರೆಯಲಿದೆ ಎಂದು ಪ್ರಧಾನಿ ಘೋಷಿಸಿದರು.
ಇದನ್ನೂ ಓದಿ:ಫ್ರಾನ್ಸ್‌ನಿಂದ ಭಾರತೀಯ ನೌಕಾಪಡೆಗೆ 26 ರಫೇಲ್ ಜೆಟ್‌ಗಳ ಖರೀದಿಗೆ ಅನುಮೋದನೆ