ಇಸ್ಲಾಮಾಬಾದ್ (ಪಾಕಿಸ್ತಾನ) : ನೂರಾರು ಜನರನ್ನು ಬಲಿ ಪಡೆದ ಗ್ರೀಸ್ ಕರಾವಳಿಯಲ್ಲಿ ಸಂಭವಿಸಿದ ದೋಣಿ ದುರಂತಕ್ಕೆ ಗ್ರೀಕ್ ಕರಾವಳಿ ರಕ್ಷಕರೇ ಕಾರಣ ಎಂದು ದುರಂತದಲ್ಲಿ ಬದುಕುಳಿದ ಪಾಕಿಸ್ತಾನಿ ನಾಗರಿಕರು ಆರೋಪಿಸಿದ್ದಾರೆ. ನೂರಾರು ಜನರನ್ನು ಹೊತ್ತ ಹಡಗನ್ನು ಉದ್ದೇಶಪೂರ್ವಕವಾಗಿ ಮುಳುಗಲು ಬಿಡಲಯಾಯಿತು ಮತ್ತು ಯಾವುದೇ ರಕ್ಷಣಾ ಕಾರ್ಯಾಚರಣೆ ಮಾಡಲಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ದುರಂತದ ಸಮಯದಲ್ಲಿ ಗ್ರೀಕ್ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಸಂತ್ರಸ್ತರು ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೋಣಿ ಮುಳುಗಿದಾಗ ಅದರಲ್ಲಿ ಎಷ್ಟು ಜನ ಇದ್ದರು ಎಂಬುದರ ಬಗ್ಗೆ ಯುರೋಪ್‌ನ ಅಧಿಕಾರಿಗಳಿಗೆ ಇನ್ನೂ ಸ್ಪಷ್ಟ ಕಲ್ಪನೆ ಇಲ್ಲ. ಹಡಗಿನಲ್ಲಿ ಅಂದಾಜು 400 ರಿಂದ 700 ಕ್ಕಿಂತ ಹೆಚ್ಚು ಜನರಿದ್ದರು ಎಂದು ಅಂದಾಜಿಸಲಾಗಿದೆ. ಅದರಲ್ಲಿ ಪಾಕಿಸ್ತಾನದ ನೂರಾರು ಜನ ಇರುವ ಬಗ್ಗೆ ಅಂದಾಜಿಸಲಾಗಿದೆ. ದುರಂತ ಘಟನೆಯ ನಂತರ ಇಬ್ಬರು ಪಾಕಿಸ್ತಾನಿ ಬದುಕುಳಿದವರ ಹೇಳಿಕೆ ಬಹಿರಂಗವಾಗಿದೆ.
ಅವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಅವರೇ ಅದನ್ನು ಮುಳುಗಿಸಿದ್ದಾರೆ ಎಂದು ದುರಂತದಲ್ಲಿ ಬದುಕುಳಿದವರ ಪೈಕಿ ಓರ್ವ ಹೇಳಿದ್ದಾರೆ. ಐದು ಹಗಲು ಮತ್ತು ಆರು ರಾತ್ರಿಗಳ ಕಾಲ ಮುಳುಗದ ಹಡಗು ಅದೇ ಸಮಯದಲ್ಲಿ ಯಾಕೆ ಮುಳುಗಿತು ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ಹಡಗಿನ ಇಂಜಿನ್ ಕೆಟ್ಟುಹೋಗಿತ್ತು ಹಾಗೂ ಅದರ ಮಧ್ಯೆ ಹಡಗು ಇನ್ನೂ ಒಂದು ವಾರ ಪ್ರಯಾಣಿಸಬೇಕಿತ್ತು ಎಂದು ಬದುಕುಳಿದ ಕೆಲವರು ಹೇಳಿದ್ದಾರೆ. "ನಮ್ಮ ಎಂಜಿನ್ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರೂ ಹಡಗು ಮುಳುಗಲಿಲ್ಲ. ಆರನೇ ರಾತ್ರಿ ನಾನು ಸಮಯವನ್ನು ಪರಿಶೀಲಿಸಿದೆ, ಆಗ 2:15 ಗಂಟೆಯಾಗಿತ್ತು. ಸುಮಾರು 10 ನಿಮಿಷಗಳ ನಂತರ ಅಂದರೆ ಸುಮಾರು 2:30 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು.