ದೋಹಾ (ಕತಾರ್):ಇಸ್ರೇಲ್ ಹಾಗೂ ಹಮಾಸ್ ನಡುವಿನ ನಾಲ್ಕು ದಿನಗಳ ಕದನ ವಿರಾಮ ಇಂದಿನಿಂದ ಆರಂಭವಾಗಿದೆ. ಇದು ಎರಡೂ ಕಡೆಗಳಿಗೆ ಇಸ್ರೇಲ್ನ ಒತ್ತೆಯಾಳು ನಾಗರಿಕರು ಮತ್ತು ಪ್ಯಾಲೆಸ್ಟೈನ್ನ ಕೈದಿಗಳ ವಿನಿಮಯಕ್ಕೆ ದಾರಿ ಮಾಡಿಕೊಟ್ಟಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕದನ ವಿರಾಮ ಶುರುವಾಗಿದೆ. ತಾತ್ಕಾಲಿಕವಾಗಿ ಸಂಘರ್ಷ ನಿಲ್ಲಿಸಿರುವುದು ಗಾಜಾದ 2.3 ಮಿಲಿಯನ್ ಜನರಿಗೆ ಕೊಂಚ ನಿರಾಳತೆ ಸಿಕ್ಕಂತಾಗಿದೆ. ಈ ಕದನ ವಿರಾಮದ ಅವಧಿಯಲ್ಲಿ ಹಮಾಸ್ ಗುಂಪು ಸುಮಾರು 240 ಒತ್ತೆಯಾಳುಗಳ ಪೈಕಿ ಕನಿಷ್ಠ 50 ಜನರನ್ನು ಬಿಡುಗಡೆ ಮಾಡುವ ವಾಗ್ದಾನ ನೀಡಿದೆ.
ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲಿನ ದಾಳಿ ವೇಳೆ ಹಮಾಸ್ ಹಾಗೂ ಇತರ ಉಗ್ರಗಾಮಿಗಳು ಈ 240 ಜನರನ್ನು ವಶಕ್ಕೆ ಪಡೆದು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಮತ್ತೊಂದೆಡೆ, ಇಸ್ರೇಲ್ 150 ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿದೆ ಎಂದು ಹಮಾಸ್ ಹೇಳಿಕೊಂಡಿದೆ.
ಎರಡೂ ಕಡೆಯವರು ಮೊದಲು ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡುತ್ತಾರೆ. ಅಲ್ಲದೇ, ಹೆಚ್ಚುವರಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ, ಕದನ ವಿರಾಮ ವಿಸ್ತರಿಸುವುದಾಗಿ ಇಸ್ರೇಲ್ ತಿಳಿಸಿದೆ. ಬಿಡುಗಡೆಯಾಗುವ ಪ್ರತಿ ಹೆಚ್ಚುವರಿ 10 ಒತ್ತೆಯಾಳುಗಳಿಗೆ ಕದನ ವಿರಾಮವನ್ನು ಹೆಚ್ಚುವರಿ ಒಂದು ದಿನ ವಿಸ್ತರಿಸಲಾಗುವುದು ಎಂದು ಇಸ್ರೇಲ್ ಹೇಳಿದೆ.