ಬೀಜಿಂಗ್ (ಚೀನಾ) : ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಸಂಶೋಧಕರೊಬ್ಬರು ಕೊರೊನಾವೈರಸ್ ಬಗ್ಗೆ ಅಚ್ಚರಿ ಹಾಗೂ ಆತಂಕದ ಹೇಳಿಕೆಗಳನ್ನು ನೀಡಿದ್ದಾರೆ. ವೈರಸ್ ಅನ್ನು ಚೀನಾವು ಜೈವಿಕ ಶಸ್ತ್ರಾಸ್ತ್ರವಾಗಿ ವಿನ್ಯಾಸಗೊಳಿಸಿತ್ತು ಮತ್ತು ವೈರಸ್‌ನ ನಾಲ್ಕು ವಿಭಿನ್ನ ತಳಿಗಳನ್ನು ತಮಗೆ ನೀಡಿ, ಅದರಲ್ಲಿ ಯಾವುದು ಅತಿ ವೇಗವಾಗಿ ಹರಡುತ್ತದೆ ಎಂಬುದನ್ನು ಕಂಡು ಹಿಡಿಯುವಂತೆ ಸೂಚಿಸಲಾಗಿತ್ತು ಎಂದು ಆ ಸಂಶೋಧಕರು ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಚೀನಾ ಮತ್ತು ಚೀನೀ ಕಮ್ಯುನಿಸ್ಟ್ ಪಾರ್ಟಿ (CCP) ಬಗ್ಗೆ ಮಾಹಿತಿ ಮತ್ತು ಅನನ್ಯ ಒಳನೋಟಗಳನ್ನು ಒದಗಿಸುವ ಇಂಟರ್ ನ್ಯಾಷನಲ್ ಪ್ರೆಸ್ ಅಸೋಸಿಯೇಷನ್‌ನ ಸದಸ್ಯರಾದ ಜೆನ್ನಿಫರ್ ಝೆಂಗ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ವುಹಾನ್‌ನ ಸಂಶೋಧಕ ಚಾವೊ ಶಾವೊ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸಂದರ್ಶನದಲ್ಲಿ ಚಾವೋ ಹೇಳಿದ್ದಿಷ್ಟು:ಇಪ್ಪತ್ತಾರು ನಿಮಿಷಗಳ ಸಂದರ್ಶನದಲ್ಲಿ ಚಾವೊ ಶಾವೊ ಮಾತನಾಡಿದ್ದಾರೆ. ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಇನ್ನೊಬ್ಬ ಸಂಶೋಧಕ ಶಾನ್ ಚಾವೋ ಎಂಬುವರಿಗೆ ಅವರ ಮೇಲಧಿಕಾರಿಯು ನಾಲ್ಕು ವಿಭಿನ್ನ ತಳಿಯ ಕೊರೊನಾವೈರಸ್ ನೀಡಿದ್ದನ್ನು ಮತ್ತು ಅದರಲ್ಲಿ ಯಾವುದು ಅತ್ಯಧಿಕವಾಗಿ ಇತರ ಜೀವಿಗಳಿಗೆ ಹರಡಬಲ್ಲದು ಎಂಬುದನ್ನು ಪರೀಕ್ಷಿಸಲು ಸೂಚಿಸಿದ್ದರು ಎಂದು ಶಾನ್ ಚಾವೋ ಒಪ್ಪಿಕೊಂಡಿರುವುದನ್ನು ಚಾವೊ ಶಾವೊ ಸಂದರ್ಶನದಲ್ಲಿ ವಿವರಿಸಿದ್ದಾರೆ. ನಾಲ್ಕು ವಿಭಿನ್ನ ತಳಿಯ ಕೊರೊನಾವೈರಸ್ ಪೈಕಿ ಯಾವುದು ಮಾನವ ಸೇರಿದಂತೆ ಇತರ ಜೀವಿಗಳಿಗೆ ಸುಲಭವಾಗಿ ಹರಡುತ್ತದೆ ಎಂಬುದನ್ನು ಸಹ ಕಂಡು ಹಿಡಿಯುವಂತೆ ಶಾನ್ ಚಾವೊ ಅವರಿಗೆ ತಿಳಿಸಲಾಗಿತ್ತಂತೆ.
ಕೊರೊನಾ ಜೈವಿಕ ಶಸ್ತ್ರಾಸ್ತ್ರ- ಚಾವೋ ಶಾವೊ:ಕೊರೊನಾವೈರಸ್ ಎಂಬುದು ಜೈವಿಕ ಶಸ್ತ್ರಾಸ್ತ್ರವಾಗಿದೆ ಎಂದು ಚಾವೊ ಶಾವೊ ಹೇಳಿದ್ದಾರೆ. ವುಹಾನ್‌ನಲ್ಲಿ ನಡೆದ 2019 ರ ಮಿಲಿಟರಿ ವರ್ಲ್ಡ್ ಗೇಮ್ಸ್‌ನಲ್ಲಿ ತಮ್ಮ ಹಲವಾರು ಸಹೋದ್ಯೋಗಿಗಳು ಕೆಲ ಸಮಯದವರೆಗೆ ನಾಪತ್ತೆಯಾಗಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ. ನಂತರ ನಾಪತ್ತೆಯಾದವರ ಪೈಕಿ ಒಬ್ಬರು ವಿವಿಧ ದೇಶಗಳ ಕ್ರೀಡಾಪಟುಗಳು ತಂಗಿರುವ ಹೋಟೆಲ್‌ಗಳಿಗೆ ಆರೋಗ್ಯ ಅಥವಾ ನೈರ್ಮಲ್ಯ ಪರಿಸ್ಥಿತಿಗಳನ್ನು ಪರಿಶೀಲಿಸಲು ತೆರಳಿದ್ದರು ಎಂಬುದು ತಿಳಿದು ಬಂದಿತು. ಆದರೆ, ನೈರ್ಮಲ್ಯ ಪರೀಕ್ಷಿಸಲು ವೈರಾಲಜಿಸ್ಟ್‌ಗಳ ಅಗತ್ಯವಿರುವುದಿಲ್ಲ. ಹೀಗಾಗಿ ವೈರಸ್ ಹರಡುವ ಉದ್ದೇಶದಿಂದಲೇ ಅವರನ್ನು ಅಲ್ಲಿಗೆ ಕಳುಹಿಸಲಾಗಿತ್ತು ಎಂದು ಚಾವೊ ಶಾನ್ ಶಂಕಿಸಿದ್ದಾರೆ.
ನನನ್ನು ಅಲ್ಲಿಗೆ ಕಳುಹಿಸಿದ್ದೇಕೆ ಗೊತ್ತೇ?:"ಇದಲ್ಲದೆ ಏಪ್ರಿಲ್ 2020 ರಲ್ಲಿ, ಪರಿವರ್ತನಾ ಶಿಬಿರಗಳಲ್ಲಿ ಬಂಧಿಯಾಗಿರುವ ಉಯಿಘುರ್ಗಳ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಲು ನನ್ನನ್ನು ಕ್ಸಿನ್‌ಜಿಯಾಂಗ್‌ಗೆ ಕಳುಹಿಸಲಾಗಿತ್ತು. ಆದರೆ ಆರೋಗ್ಯ ತಪಾಸಣೆಗೆ ವೈರಾಲಾಜಿಸ್ಟ್ಗಳ ಅಗತ್ಯವಿರುವುದಿಲ್ಲ. ಹೀಗಾಗಿ ಒಂದೋ ವೈರಸ್ ಹರಡಲು ಅಥವಾ ವೈರಸ್ ಮನುಷ್ಯರ ಮೇಲೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಲು ನನ್ನನ್ನು ಅಲ್ಲಿಗೆ ಕಳುಹಿಸಲಾಗಿತ್ತು" ಎಂದು ಚಾವೊ ಶಾನ್ ಹೇಳಿದ್ದಾರೆ.
2020 ರ ಮಾರ್ಚ್‌ನಿಂದ ಏಪ್ರಿಲ್‌ವರೆಗಿನ ಅವಧಿಯಲ್ಲಿ ನಡೆದ ಘಟನಾವಳಿಗಳ ಆಘಾತಕಾರಿ ಮಾಹಿತಿಯನ್ನು ಚಾವೋ ಶಾನ್ ಸ್ವತಃ ಸಂದರ್ಶಕರಿಗೆ ಬಹಿರಂಗಪಡಿಸಿದ್ದಾರೆ. ಆದಾಗ್ಯೂ ಇದು ಸಂಪೂರ್ಣ ಸತ್ಯದ ಒಂದು ತುಣುಕು ಮಾತ್ರ. ಜಗತ್ತಿನಾದ್ಯಂತ 7 ಮಿಲಿಯನ್ಗೂ ಅಧಿಕ ಸಾವುಗಳಿಗೆ ಕಾರಣವಾದ ಕೊರೊನಾವೈರಸ್ನ ಮೂಲದ ಬಗೆಗಿನ ಅನ್ವೇಷಣೆಗಳು ಮುಂದುವರಿಯಲಿವೆ ಎಂದು ಸಂದರ್ಶಕಿ ಚೀನಾ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಲೇಖಕಿ ಜೆನ್ನಿಫರ್ ಝೆಂಗ್ ಹೇಳಿದ್ದಾರೆ.
ಇದನ್ನೂ ಓದಿ : WhatsApp Pink scam: ಎಚ್ಚರ; ವಾಟ್ಸ್ಆ್ಯಪ್ ಪಿಂಕ್ ಇನ್ಸ್ಟಾಲ್ ಮಾಡಿದ್ರೆ ಈಗಲೇ ಅನ್ - ಇನ್ಸ್ಟಾಲ್ ಮಾಡಿ!