ಇಸ್ಲಾಮಾಬಾದ್, ಪಾಕಿಸ್ತಾನ :ಈಗಷ್ಟೇ ರಾಜಕೀಯ ಗೊಂದಲಗಳಿಂದ ಮುಕ್ತಿ ಹೊಂದಿದಂತೆ ಕಾಣುತ್ತಿರುವ ಪಾಕಿಸ್ತಾನದಲ್ಲಿ ಉಗ್ರರ ದಾಳಿ ಆಗಾಗ ನಡೆಯುತ್ತಿರುತ್ತವೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಉತ್ತರ ವಜೀರಿಸ್ತಾನ್ ಜಿಲ್ಲೆಯಲ್ಲಿ ಗುರುವಾರ ನಡೆದ ಎರಡು ಭಯೋತ್ಪಾದಕ ದಾಳಿಗಳಲ್ಲಿ ಎಂಟು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪಾಕಿಸ್ತಾನದ ಮಿಲಿಟರಿಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನೀಡಿದ ಹೇಳಿಕೆಯ ಪ್ರಕಾರ, ಮೊದಲ ದಾಳಿ ಉತ್ತರ ವಜಿರಿಸ್ತಾನದ ದತಖೇಲ್ ಪಟ್ಟಣದಲ್ಲಿ ನಡೆದಿದೆ. ಭಯೋತ್ಪಾದಕರು ಚಲಿಸುತ್ತಿದ್ದ ಮಿಲಿಟರಿ ವಾಹನದ ಮೇಲೆ ಅಸಾಲ್ಟ್ ಗನ್ ಮತ್ತು ರಾಕೆಟ್-ಲಾಂಚರ್ ಬಳಿಸಿ ದಾಳಿ ನಡೆಸಿದ್ದಾರೆ. ಈ ವೇಳೆ ಆರು ಸೈನಿಕರು ಮೃತಪಟ್ಟಿದ್ದು, ಸೈನಿಕರ ದೇಹಗಳನ್ನು ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಸ್ಥಳಾಂತರಿಸಲಾಗಿದೆ.
ಎರಡನೇ ದಾಳಿ ಉತ್ತರ ವಜಿರಿಸ್ತಾನ್ ಜಿಲ್ಲೆಯ ಇಶಾಮ್ ಪ್ರದೇಶದಲ್ಲಿ ನಡೆದಿದ್ದು, ಸಶಸ್ತ್ರ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮಿಯಾನ್ವಾಲಿ, ಅಸ್ಮತುಲ್ಲಾ ಖಾನ್ ಎಂಬುವರು ಮೃತಪಟ್ಟಿದ್ದಾರೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ವರದಿಯನ್ನು ಉಲ್ಲೇಖಿಸಿ, ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಅಂದರೆ ಮಾರ್ಚ್ವರೆಗೆ ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಒಟ್ಟು 105 ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದು, 97 ಸೈನಿಕರು ಮತ್ತು ಸೇನಾ ಅಧಿಕಾರಿಗಳು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲ, 128 ಭಯೋತ್ಪಾದಕರನ್ನ ಕೊಲ್ಲಲಾಗಿದ್ದು, 270 ಮಂದಿಯನ್ನು ಬಂಧಿಸಲಾಗಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಹೇಳಿದೆ.
ಇದನ್ನೂ ಓದಿ:ಭವಿಷ್ಯದ ದೊಡ್ಡ ಸವಾಲುಗಳನ್ನು ಎದುರಿಸಲು ಭಾರತ-ಅಮೆರಿಕ ಸಹಭಾಗಿತ್ವ ಅಗತ್ಯ : ಬ್ಲಿಂಕೆನ್