ಗ್ವಾನಾಜುವಾಟೊ (ಮೆಕ್ಸಿಕೋ):ಸೆಂಟ್ರಲ್ ಮೆಕ್ಸಿಕೋದಲ್ಲಿ ಭಾನುವಾರ ಮುಂಜಾನೆ ಕ್ರಿಸ್‌ಮಸ್ ಧಾರ್ಮಿಕ ಸಮಾರಂಭದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 16ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಗ್ವಾನಾಜುವಾಟೊ ರಾಜ್ಯದ ಅಧಿಕಾರಿಗಳು ಗುಂಡಿನ ದಾಳಿ ಬಗ್ಗೆ ಮಾಹಿತಿ ನೀಡಿದ್ದಾರೆ. ಸಲ್ವಾಟಿಯೆರಾ ನಗರದಲ್ಲಿ ಹಿಂಸಾಚಾರ ನಡೆದಿದೆ. ಇದುವರೆಗೆ, 16 ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ ಅಂತಾ ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಟ್ವಿಟರ್‌ನಲ್ಲಿ ತಿಳಿಸಿದೆ.
ಕ್ರಿಸ್‌ಮಸ್ ಕಥೆಯ ಅಂಶಗಳನ್ನು ಆಚರಿಸುವ "ಪೊಸಾಡಾಸ್" ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದ ಯುವಕರ ಮೇಲೆ ಗುಂಡಿನ ದಾಳಿ ನಡೆದಿದೆ. ಉದ್ದನೆಯ ಬಂದೂಕುಗಳನ್ನು ಹೊಂದಿರುವ ಸುಮಾರು ಆರು ಜನರು ನಡೆಯುತ್ತಿದ್ದ ಧಾರ್ಮಿಕ ಸಮಾರಂಭಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸಮಾರಂಭದಲ್ಲಿ 100ಕ್ಕೂ ಹೆಚ್ಚು ಯುವಕರು ಸೇರಿದಂತೆ ಅನೇಕರು ಭಾಗಿಯಾಗಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗ್ವಾನಾಜುವಾಟೊ ಅಟಾರ್ನಿ ಜನರಲ್ ಕಚೇರಿ, ಸ್ಯಾನ್ ಜೋಸ್ ಡೆಲ್ ಕಾರ್ಮೆನ್ ಸಮುದಾಯದಲ್ಲಿ ಸಾಂಪ್ರದಾಯಿಕ ಮೆಕ್ಸಿಕನ್ ಆಚರಣೆಯಾದ ಕ್ರಿಸ್‌ಮಸ್ ಪೊಸಾಡಾಸ್ದಲ್ಲಿ ಭಾನುವಾರ ರಕ್ತಪಾತ ಸಂಭವಿಸಿದೆ. ಶಸ್ತ್ರಸಜ್ಜಿತ ದಾಳಿಕೋರರ ಗುಂಪು ಅನಿರೀಕ್ಷಿತವಾಗಿ ಆಗಮಿಸಿ ಪೊಸಾಡಾಸ್ ಭಾಗವಹಿಸುವವರ ಮೇಲೆ ಗುಂಡು ಹಾರಿಸಿದೆ. ಅವರಲ್ಲಿ ಹೆಚ್ಚಿನವರು ಯುವಕರು ಮೃತಪಟ್ಟಿದ್ದಾರೆ ಎಂದು ಹೇಳಿತು.
ಗ್ವಾನಾಜುವಾಟೊದಲ್ಲಿ ಜಲಿಸ್ಕೋ ಗ್ಯಾಂಗ್ ಮತ್ತು ಸಿನಾಲೋವಾ ಗ್ಯಾಂಗ್‌ನಿಂದ ಬೆಂಬಲಿತವಾದ ಸ್ಥಳೀಯ ಗ್ಯಾಂಗ್‌ಗಳ ನಡುವೆ ದ್ವೇಷವಿದೆ. ಇದರಿಂದಾಗಿ ರಾಜ್ಯದಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿವೆ. ದೇಶದಲ್ಲೇ ಅತಿ ಹೆಚ್ಚು ಕೊಲೆಗಳು ನಡೆಯುತ್ತಿರುವ ರಾಜ್ಯ ಇದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕ್ರಿಮಿನಲ್ ಗುಂಪುಗಳ ನಡುವಿನ ವಿವಾದಗಳಿಂದಾಗಿ ಈ ಪ್ರದೇಶದಲ್ಲಿ ಹಿಂಸಾಚಾರ ಹೆಚ್ಚಾಗ್ತಿದೆ.
ಓದಿ:ವಿದೇಶಿ ಮಹಿಳಾ ಡಿಜೆ ಮೇಲೆ ಅತ್ಯಾಚಾರ, ಲೈಂಗಿಕ ಶೋಷಣೆ ಆರೋಪ: ಮ್ಯೂಸಿಕ್ ಕಂಪನಿ ಮಾಲೀಕ ಬಂಧನ
ಚರ್ಚ್ ಕುಸಿತ- 9 ಸಾವು:ಉತ್ತರ ಮೆಕ್ಸಿಕೊದಲ್ಲಿ ಅಕ್ಟೋಬರ್ 1ರ ಭಾನುವಾರದಂದು ಸಾಮೂಹಿಕ ಪ್ರಾರ್ಥನೆಯ ಸಮಯದಲ್ಲಿ ಚರ್ಚ್‌ನ ಛಾವಣಿ ಕುಸಿದು ಒಂಬತ್ತು ಜನರು ಸಾವನ್ನಪ್ಪಿದ್ದು, ಸುಮಾರು 50 ಜನರು ಗಾಯಗೊಂಡಿದ್ದರು. ಈ ದುರಂತದ ಬಗ್ಗೆ ಅಧಿಕಾರಿಗಳು ಖಚಿತಪಡಿಸಿದ್ದರು. ಚರ್ಚ್ ಕುಸಿಯುವ ಸಂದರ್ಭ ಸುಮಾರು 100 ಜನರು ಚರ್ಚ್‌ನೊಳಗಿದ್ದರು ಎಂದು ತಮೌಲಿಪಾಸ್ ರಾಜ್ಯ ಪೊಲೀಸರು ತಿಳಿಸಿದ್ದರು. ಈ ಘಟನೆಗೆ ಚರ್ಚ್‌ನ ರಚನಾತ್ಮಕ ವೈಫಲ್ಯದಿಂದ ಉಂಟಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದರು.