ಸನಾ (ಯೆಮೆನ್):ಇಲ್ಲಿನ ಅಡೆನ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, 25 ಜನರು ಮೃತಪಟ್ಟಿದ್ದರೆ. ಈ ಸ್ಫೋಟದಲ್ಲಿ 110 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂತನವಾಗಿ ರಚನೆಯಾದ ಸರ್ಕಾರದ ಸಂಪುಟದ ಸದಸ್ಯರಿದ್ದ ವಿಮಾನವು ಲ್ಯಾಂಡ್ ಆಗುತ್ತಿದ್ದಂತೆಯೇ ಏರ್ಪೋರ್ಟ್ನಲ್ಲಿ ಬಾಂಬ್ ಸ್ಫೋಟಗೊಂಡಿದೆ. ಸರ್ಕಾರಿ ವಿಮಾನದಲ್ಲಿದ್ದ ಸಚಿವರು ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಇನ್ನು ಈ ಸ್ಫೋಟದಲ್ಲಿ 110 ಜನರು ಗಾಯಗೊಂಡಿದ್ದಾರೆ. ರಕ್ಷಣ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.