ಜೆರುಸಲೆಮ್ (ಇಸ್ರೇಲ್): ಶತ್ರು ವಿಮಾನಗಳಿಂದ ರಕ್ಷಣೆ ನೀಡುವ ಉದ್ದೇಶದಿಂದ ಭಾರತ ಹಾಗೂ ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಮಧ್ಯಮ ಶ್ರೇಣಿಯ ಮೇಲ್ಮೈ ಗಾಳಿಯ ಕ್ಷಿಪಣಿಯ (ಎಂಆರ್‌ಎಸ್‌ಎಎಂ) ರಕ್ಷಣಾ ವ್ಯವಸ್ಥೆಯನ್ನು ಉಭಯ ದೇಶಗಳು ಯಶಸ್ವಿಯಾಗಿ ಪರೀಕ್ಷಿಸಿವೆ.
ಕಳೆದ ವಾರ ಈ ಪರೀಕ್ಷೆಯನ್ನು ನಡೆಸಲಾಗಿದ್ದು, ಶಸ್ತ್ರಾಸ್ತ್ರ ವ್ಯವಸ್ಥೆಯ ಎಲ್ಲ ಅಂಶಗಳನ್ನು ಮೌಲ್ಯೀಕರಿಸಲಾಗಿದೆ ಎಂದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಆರ್‌ಎಸ್‌ಎಎಂ ಒಂದು ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದ್ದು, ಅದು ವಿವಿಧ ವೈಮಾನಿಕ ದಾಳಿಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇದು 50-70 ಕಿ.ಮೀ ವ್ಯಾಪ್ತಿಯಲ್ಲಿ ಶತ್ರು ವಿಮಾನಗಳನ್ನು ಹೊಡೆದುರುಳಿಸಬಹುದು ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.
ಇಸ್ರೇಲ್ ಮತ್ತು ಭಾರತದ ಇತರ ರಕ್ಷಣಾ ಕಂಪನಿಗಳ ಸಹಭಾಗಿತ್ವದಲ್ಲಿ, ಐಎಐ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ. ಎಂಆರ್‌ಎಸ್‌ಎಎಮ್ ಅನ್ನು ಭಾರತೀಯ ಸೇನೆಯ ಮೂರು ವಿಭಾಗಗಳು ಮತ್ತು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬಳಸುತ್ತಿವೆ.