ರ್ಜೆಸ್ಜೋವ್ (ಪೋಲೆಂಡ್):ರಷ್ಯಾ ಮತ್ತು ಉಕ್ರೇನ್ ನಡುವಣ ಕದನದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ತನ್ನ ಪ್ರಾಣ ಕಳೆದುಕೊಂಡಿರುವುದು ತಮಗೆಲ್ಲ ಗೊತ್ತೇ ಇದೆ. ನವೀನ್ ಸಾವಿನ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ, ಉಕ್ರೇನ್ ರಾಜಧಾನಿ ಕೀವ್ದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಪೋಲೆಂಡ್‌ನ ರ್ಜೆಸ್ಜೋವ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಜನರಲ್ ವಿಕೆ ಸಿಂಗ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕೇವ್ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ. ಹಾಗೂ ಗಾಯಗೊಂಡಿರುವ ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಕೆ ಸಿಂಗ್ ಮಾಹಿತಿ ನೀಡಿದ್ದಾರೆ.
ಭಾರತೀಯ ರಾಯಭಾರ ಕಚೇರಿಯು ಈ ಹಿಂದೆ ಎಲ್ಲರೂ ಕೀವ್ ತೊರೆಯಬೇಕು ಎಂದು ಮನವಿ ಮಾಡಿತ್ತು. ಈ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ಸಂದೇಶ ಕೂಡಾ ರವಾನೆ ಮಾಡಿತ್ತು. ಯುದ್ಧದ ಸಂದರ್ಭದಲ್ಲಿ, ಗನ್ ಬುಲೆಟ್ಗಳು ಯಾರ ಧರ್ಮ ಮತ್ತು ರಾಷ್ಟ್ರೀಯತೆಯನ್ನು ನೋಡುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರಿಕರು ಉಕ್ರೇನ್ ತೊರೆಯುವಂತೆ ಸಲಹೆ ಹಾಗೂ ಸೂಚನೆ ರವಾನೆ ಮಾಡಲಾಗಿತ್ತು ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ:ಉಕ್ರೇನ್ - ರಷ್ಯಾ ಯುದ್ಧ: ಅಮೆರಿಕದಿಂದ ಟಿಪಿಎಸ್ ವಿಸ್ತರಣೆ.. ಮಾಜಿ ಚಾನ್ಸೆಲರ್ ವಿರುದ್ಧ ಜರ್ಮನಿಯಲ್ಲಿ ಅಸಮಾಧಾನ
ಯುದ್ಧ ಪೀಡಿತ ದೇಶ ಉಕ್ರೇನ್‌ನಿಂದ ವಿದ್ಯಾರ್ಥಿಗಳು ಪಲಾಯನ ಮಾಡುತ್ತಿದ್ದು, ಭಾರತಕ್ಕೆ ಸುರಕ್ಷಿತವಾಗಿ ಮರಳಲು ಪೋಲೆಂಡ್‌ನ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ನಾಲ್ವರು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಉಕ್ರೇನ್‌ಗೆ ಹೊಂದಿಕೊಂಡಿರುವ ದೇಶಗಳಲ್ಲಿ ಬೀಡುಬಿಟ್ಟಿದ್ದು, ಭಾರತೀಯರನ್ನು ದೇಶಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.