ಲಿಸ್ಬನ್ (ಪೋರ್ಚುಗಲ್): ಬೆಂಕಿಯ ಕಾರಣದಿಂದ ಬೃಹತ್ ಹಡಗಿನ 22 ಸಿಬ್ಬಂದಿಯನ್ನು ಪೋರ್ಚುಗೀಸ್ನ ನೌಕಾದಳ ರಕ್ಷಿಸಿದ ಘಟನೆ ನಡೆದಿದೆ. ಮಧ್ಯ ಅಟ್ಲಾಂಟಿಕ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಫೆಲಿಸಿಟಿ ಏಸ್ ಹಡಗು ತೇಲುತ್ತಿರುವುದಾಗಿ ಪೋರ್ಚುಗೀಸ್ ನೌಕಾಪಡೆ ತಿಳಿಸಿದೆ. ಸಿಬ್ಬಂದಿಯನ್ನು ರಕ್ಷಿಸಿದ ಬಳಿಕ ಫೆಲಿಸಿಟಿ ಏಸ್ ಹಡಗು ಪೋರ್ಚುಗಲ್‌ನ ಅಜೋರ್ಸ್ ದ್ವೀಪಗಳ ಬಳಿ ತೇಲುತ್ತಿರುವ ಬಗ್ಗೆ ವರದಿಯಾಗಿದೆ.
ಈ ಪ್ರದೇಶದಲ್ಲಿ ಇತರ ಹಡಗುಗಳ ಸಾಗಣೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೋರ್ಚುಗೀಸ್ ನೌಕಾಪಡೆಯ ವಕ್ತಾರ ಸಿಎಮ್‌ಡಿಆರ್ ಜೋಸ್ ಸೌಸಾ ಲೂಯಿಸ್ ಹೇಳಿದ್ದಾರೆ. ಫೆಲಿಸಿಟಿ ಏಸ್ ಹಡಗು 17,000 ಮೆಟ್ರಿಕ್ ಟನ್ (18,700 ಟನ್) ಗಿಂತ ಹೆಚ್ಚಿನ ಸರಕುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ಈ ಹಡಗುಗಳು ಬಹು ಡೆಕ್‌ಗಳಲ್ಲಿ ಸಾವಿರಾರು ವಾಹನಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿವೆ. ಈ ಹಡಗಿನಲ್ಲಿ ಸುಮಾರು ನಾಲ್ಕು ಸಾವಿರ ಕಾರುಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.