ಕಾಬೂಲ್(ಅಫ್ಘಾನಿಸ್ತಾನ):ಪಂಜ್ಶೀರ್ ಪ್ರಾಂತ್ಯದ ಎಲ್ಲಾ ಜಿಲ್ಲೆಗಳ ಮೇಲೆ ನಾವು ನಿಯಂತ್ರಣ ಸಾಧಿಸಿದ್ದೇವೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಈ ಬೆನ್ನಲ್ಲೇ ಪಂಜ್ಶೀರ್ ಪ್ರಾಂತ್ಯದ ಸೇನೆ ತಾಲಿಬಾನ್ ಹೇಳಿಕೆಯನ್ನು ನಿರಾಕರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತಾಲಿಬಾನ್‌ನ ಸಾಂಸ್ಕೃತಿಕ ವ್ಯವಹಾರಗಳ ಆಯೋಗದ ಉಪಾಧ್ಯಕ್ಷ ಅಹ್ಮದುಲ್ಲಾ ವಾಸಿಕ್ ಅವರು ತಾಲಿಬಾನ್ ಹೋರಾಟಗಾರರು ಮತ್ತು ಪಂಜ್‌ಶೀರ್‌ನ ರೆಸಿಸ್ಟೆನ್ಸ್ ಫ್ರಂಟ್ ನಡುವೆ ಪಂಜ್‌ಶೀರ್‌ನ ಕೇಂದ್ರಭಾಗದಲ್ಲಿ ಹೋರಾಟ ಮುಂದುವರೆದಿದೆ ಎಂದು ಹೇಳಿರುವುದು ಭಾನುವಾರ ವರದಿಯಾಗಿದೆ.
ಜೊತೆಗೆ ಇಸ್ಲಾಮಿಕ್ ಎಮಿರೇಟ್‌ನ ಮುಜಾಹಿದ್ದೀನ್ ಪಡೆಗಳು ಪಂಜ್‌ಶೀರ್‌ನ ಎಲ್ಲಾ ಜಿಲ್ಲೆಗಳು ಮತ್ತು ಪ್ರದೇಶಗಳಲ್ಲಿ ಸಕ್ರಿಯವಾಗಿವೆ. ಪಂಜ್‌ಶೀರ್‌ನ ಕೇಂದ್ರ ಭಾಗದಲ್ಲಿ ಮಾತ್ರ ಪ್ರತಿರೋಧ ಕಂಡುಬರುತ್ತಿದೆ ಎಂದು ಅಹ್ಮದುಲ್ಲಾ ವಾಸಿಕ್ ಹೇಳಿದ್ದಾರೆಂದು ಟೋಲೋ ನ್ಯೂಸ್ ವರದಿ ಮಾಡಿದೆ.
ಪಂಜ್‌ಶೀರ್‌ನ ರೆಸಿಸ್ಟೆನ್ಸ್ ಫ್ರಂಟ್ ಭಾರಿ ಶಸ್ತ್ರಗಳು ಬಿದ್ದಿವೆ ಎಂದು ತಾಲಿಬಾನ್ ಹೇಳಿಕೊಂಡಿದ್ದು, ಶತ್ರುಗಳಿಂದ ಹಲವಾರು ಫಿರಂಗಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಾಲಿಬಾನ್ ಕಮಾಂಡರ್‌ಗಳಲ್ಲಿ ಒಬ್ಬರಾದ ಮೌಲ್ವಿ ಸಖಿ ದಾದ್ ಮುಜ್ಮಾರ್ ಮಾಹಿತಿ ನೀಡಿದ್ದಾರೆ.
ಆದರೂ ಪಂಜ್‌ಶೀರ್‌ನ ಸೇನಾ ಮುಖ್ಯಸ್ಥರೊಬ್ಬರು ತಾಲಿಬಾನ್ ಹೇಳಿಕೆಯನ್ನು ನಿರಾಕರಿಸಿದ್ದಾರೆ. ತಾಲಿಬಾನ್ನಿಂದ ಪಂಜ್‌ಶೀರ್‌ನ ಪಾರಿಶ್ ಜಿಲ್ಲೆಯನ್ನು ಮರು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ ಎಂದು ಸೇನಾ ಮುಖ್ಯಸ್ಥರು ಹೇಳಿರುವುದನ್ನು ಟೋಲೋ ನ್ಯೂಸ್ ಉಲ್ಲೇಖಿಸಿದೆ.
ಕನಿಷ್ಠ ಒಂದು ಸಾವಿರ ಮಂದಿ ತಾಲಿಬಾನಿ ಉಗ್ರರು ಸಿಕ್ಕಿಬಿದಿದ್ದಾರೆ. ಸ್ಥಳೀಯರ ಸಹಾಯದಿಂದ ಕೆಲವರು ಕೊಲ್ಲಲ್ಪಟ್ಟಿದ್ದು, ಇನ್ನೂ ಕೆಲವರು ಶರಣಾಗಿದ್ದಾರೆ. ಮತ್ತೆ ಕೆಲವರನ್ನು ಸೆರೆಹಿಡಿಯಲಾಗಿದೆ. ಬಂಧಿತರಲ್ಲಿ ಹೆಚ್ಚಿನವರು ವಿದೇಶಿಯರು ಮತ್ತು ಪಾಕಿಸ್ತಾನಿಯರು ಎಂದು ರೆಸಿಸ್ಟೆನ್ಸ್ ಫ್ರಂಟ್ ವಕ್ತಾರ ಫಾಹೀಮ್ ದಷ್ಟಿ ಹೇಳಿದ್ದಾರೆ. ಆದರೆ, ಎರಡೂ ಕಡೆಯ ಸಂಘರ್ಷದ ಪರಿಣಾಮಗಳ ಬಗ್ಗೆ ಯಾವುದೇ ಸ್ವತಂತ್ರ ಮೂಲ ದೃಢೀಕರಿಸಿಲ್ಲ.
ಇದನ್ನೂ ಓದಿ:ಭಯೋತ್ಪಾದಕರಿಗೆ ಪಾಕ್ ಆಶ್ರಯ ನೀಡುತ್ತಿದೆ ಎಂದ ಖ್ಯಾತ ಲೇಖಕಿ: ಸಂದರ್ಶನವನ್ನೇ ಮೊಟಕುಗೊಳಿಸಿದ BBC!