ಇಸ್ಲಾಮಾಬಾದ್: ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆ ತನ್ನ ನಿಲುವನ್ನು ಸಮರ್ಪಕವಾಗಿ ಮಂಡಿಸುವಲ್ಲಿ ಮತ್ತು ಜಾಗತಿಕ ರಾಷ್ಟ್ರಗಳನ್ನು ಒಪ್ಪಿಸುವ ವಿಚಾರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಬ್ರಿಗ್ ಇಜಾಜ್ ಅಹ್ಮದ್ ಶಾ ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಡೆಯನ್ನು ಖಂಡಿಸಿರುವ ಇಜಾಜ್ ಅಹ್ಮದ್, ಪ್ರಧಾನಿ ನಮ್ಮ ದೇಶದ ಘನತೆಯನ್ನು ಜಾಗತಿಕಮಟ್ಟದಲ್ಲಿ ಹಾಳುಗೆಡವಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.
ತಿಳಿವಳಿಕೆ ಉಳ್ಳವರು ಯಾರೂ ಸಹ ಪಾಕಿಸ್ತಾನದ ಮಾತನ್ನು ನಂಬುತ್ತಿಲ್ಲ. ಭಾರತ ಸರ್ಕಾರ ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ, ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಪಾಕಿಸ್ತಾನ ಹೇಳಿದರೆ ಯಾರೂ ನಂಬುವುದಿಲ್ಲ, ಭಾರತದ ಮಾತನ್ನು ಎಲ್ಲ ರಾಷ್ಟ್ರಗಳು ನಂಬುತ್ತವೆ. ಪಾಕ್ ಪ್ರಧಾನಿ ದೇಶದ ಘನತೆಯನ್ನು ಸಂಪೂರ್ಣವಾಗಿ ಹಾಳುಗೆಡವಿದ ಪರಿಣಾಮ ಪಾಕಿಸ್ತಾನವನ್ನು ನಂಬಲು ಯಾರೂ ಸಿದ್ಧರಿಲ್ಲ ಎಂದು ವಾಹಿನಿಯೊಂದರಲ್ಲಿ ಇಜಾಜ್ ಅಹ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಜಿನೇವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಕಾಶ್ಮೀರವನ್ನು ಭಾರತ ಸರ್ಕಾರ ಜೈಲನ್ನಾಗಿ ಪರಿವರ್ತಿಸಿದೆ ಎಂದು ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಆರೋಪಿಸಿದ್ದರು. ಆದರೆ ಈ ಮಾತಿಗೆ ಭಾರತ ತಕ್ಕ ತಿರುಗೇಟು ನೀಡಿತ್ತು. ಹೀಗಾಗಿ ಮತ್ತೊಮ್ಮೆ ಜಾಗತಿಕಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.