ಜೆರುಸಲೇಂ: ಇಂಡೋ-ಇಸ್ರೇಲ್ ದೇಶಗಳ ನಡುವಿನ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಕ್ಕೀಗ 30ರ ಹರೆಯ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಬಾಂಧವ್ಯವೃದ್ಧಿ ಹಾಗೂ 30ನೇ ವಾರ್ಷಿಕೋತ್ಸವವನ್ನು ಆಚರಿಸಲು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಏಪ್ರಿಲ್ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡುವರು.
ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ನಫ್ತಾಲಿ ಬೆನೆಟ್ ಏಪ್ರಿಲ್ 2ರ ಶನಿವಾರದಂದು ನವದೆಹಲಿಗೆ ಬಂದಿಳಿಯಲಿದ್ದಾರೆ ಎಂದು ಇಸ್ರೇಲ್ ಪ್ರಧಾನಿಯ ವಿದೇಶಿ ಮಾಧ್ಯಮ ಸಲಹೆಗಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 2ರಿಂದ ಏಪ್ರಿಲ್ 5ರವರೆಗೆ ನಾಲ್ಕು ದಿನದ ಭೇಟಿ ಇದಾಗಿದ್ದು, ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಮೈತ್ರಿಯನ್ನು ಮುನ್ನಡೆಸುವುದು, ದ್ವಿಪಕ್ಷೀಯ ಸಂಬಂಧ ವಿಸ್ತರಣೆ, ನಾವೀನ್ಯತೆ ಮತ್ತು ತಂತ್ರಜ್ಞಾನ, ಭದ್ರತೆ ಮತ್ತು ಸೈಬರ್, ಕೃಷಿ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರ ವಿಸ್ತರಿಸುವ ಗುರಿಯನ್ನು ಈ ಭೇಟಿ ಹೊಂದಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗ್ಲಾಸ್ಗೋದಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ (COP26) ಉಭಯ ನಾಯಕರ ನಡುವಿನ ಮೊದಲ ಮಾತುಕತೆ ನಡೆದಿತ್ತು. ಆ ಸಂದರ್ಭದಲ್ಲಿ ಮೋದಿ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡುವಂತೆ ಪ್ರಧಾನಿ ಬೆನೆಟ್ ಅವರನ್ನು ಆಹ್ವಾನಿಸಿದ್ದರು.
ಇದನ್ನೂ ಓದಿ:ಆರ್ಥಿಕವಾಗಿ ಶ್ರೀಲಂಕಾ ದಿವಾಳಿ: ಪೇಪರ್ ಕೊರತೆಯಿಂದ ಶಾಲಾ ಮಕ್ಕಳ ಪರೀಕ್ಷೆಗಳೇ ರದ್ದು!