ನೊಖಾಲಿ (ಬಾಂಗ್ಲಾದೇಶ): ಶುಕ್ರವಾರ ಬಾಂಗ್ಲಾದೇಶದ ನೊಖಾಲಿಯಲ್ಲಿರುವ ಇಸ್ಕಾನ್ ದೇವಸ್ಥಾನ ಮತ್ತು ಭಕ್ತರ ಮೇಲೆ ಸುಮಾರು 200ಕ್ಕೂ ಹೆಚ್ಚು ದುಷ್ಕರ್ಮಿಗಳು ದಾಳಿ ನಡೆಸಿದ್ದು, ದೇಗುಲ ಆಡಳಿತ ಮಂಡಳಿಯ ಸದಸ್ಯರೊಬ್ಬರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಅನೇಕ ಭಕ್ತರು ಗಾಯಗೊಂಡಿದ್ದಾರೆ.
ಕೊಲೆಗೀಡಾದವರನ್ನು ಪಾರ್ಥ ದಾಸ್ ಎಂದು ಗುರುತಿಸಲಾಗಿದ್ದು, ಇಂದು ಬೆಳಗ್ಗೆ ಅವರ ಮೃತದೇಹವು ದೇವಾಲಯದ ಪಕ್ಕದಲ್ಲಿರುವ ಕೊಳದಲ್ಲಿ ಪತ್ತೆಯಾಗಿದೆ. ಘಟನೆಯನ್ನು ಖಂಡಿಸಿ ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ಇಸ್ಕಾನ್, ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು, ಎಲ್ಲಾ ಹಿಂದೂಗಳ ಸುರಕ್ಷತೆಯನ್ನು ಖಾತರಿಪಡಿಸಲು ಬಾಂಗ್ಲಾ ಸರ್ಕಾರವನ್ನು ಆಗ್ರಹಿಸಿದೆ. ದೇಗುಲಕ್ಕೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಗಾಯಗೊಂಡಿರುವ ಓರ್ವ ಭಕ್ತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದೆ.
ಇಸ್ಕಾನ್ ದೇವಸ್ಥಾನದಲ್ಲಿ ಮಾತ್ರವಲ್ಲ, ಇದಕ್ಕೂ ಮುನ್ನ ಬಾಂಗ್ಲಾದೇಶದ ಹಲವಾರು ಸ್ಥಳಗಳಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಚಿತ್ತಗಾಂಗ್ ವಿಭಾಗದಲ್ಲಿ ಬರುವ ಕುಮಿಲ್ಲಾ ಜಿಲ್ಲೆಯಲ್ಲಿ ವಿಜಯ ದಶಮಿ ಪ್ರಯುಕ್ತ ನಡೆಯುತ್ತಿದ್ದ ದುರ್ಗಾಪೂಜೆ ವೇಳೆ ಅಪರಿಚಿತ ವ್ಯಕ್ತಿಗಳು ಧಾವಿಸಿ, ಅಲ್ಲಿನ ದೇವಾಲಯದಲ್ಲಿದ್ದ ಹಿಂದೂ ವಿಗ್ರಹಗಳನ್ನು ಧ್ವಂಸಗೊಳಿಸಿದ್ದರು. ಈ ಘಟನೆಯ ನಂತರ ನಡೆದ ಹಿಂಸಾಚಾರಗಳಲ್ಲಿ ಸುಮಾರು ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು.
ಇದನ್ನೂ ಓದಿ:ಬಾಂಗ್ಲಾದಲ್ಲಿ ದುರ್ಗಾಪೂಜೆ ವೇಳೆ ದುಷ್ಕರ್ಮಿಗಳ ಅಟ್ಟಹಾಸ: ಕಠಿಣ ಕ್ರಮದ ಭರವಸೆ ನೀಡಿದ ಶೇಖ್ ಹಸೀನಾ
ಚಂದ್‌ಪುರದ ಹಾಜಿಗಂಜ್, ಚಟ್ಟೋಗ್ರಾಮ್‌ನ ಬಂಶಖಾಲಿ ಮತ್ತು ಕಾಕ್ಸ್ಬಜಾರ್ನ ಪೆಕುವಾದಲ್ಲಿನ ಹಿಂದೂ ದೇವಾಲಯಗಳಲ್ಲಿಯೂ ವಿಧ್ವಂಸಕ ಘಟನೆಗಳು ವರದಿಯಾಗಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ದುರ್ಗಾ ಪೂಜೆ ಆಚರಣೆಯ ವೇಳೆ ಹಿಂಸಾಚಾರ ಸೃಷ್ಟಿಸಿದವರನ್ನು ಸೆರೆಹಿಡಿದು, ಸೂಕ್ತ ಶಿಕ್ಷೆ ನೀಡಲಾಗುತ್ತದೆ. ಕೋಮುವಾದಿ ಚಟುವಟಿಕೆಗಳನ್ನು ತಡೆಯಲು ಈ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಭಯ ನೀಡಿದ್ದರು.