ಬೀಜಿಂಗ್(ಚೀನಾ):ಕೋವಿಡ್ ಮತ್ತೆ ಅಲ್ಲಲ್ಲಿ ತನ್ನ ಅಟ್ಟಹಾಸವನ್ನು ಆರಂಭಿಸುತ್ತಿದೆ. ಚೀನಾದಲ್ಲೂ ಕೆಲವೊಂದು ಪ್ರದೇಶಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಚೀನಾ ತನ್ನ ಕೋವಿಡ್ ಲಸಿಕೆಗಳನ್ನು ವಿಶ್ವದಾದ್ಯಂತ ಹಂಚುತ್ತಿದ್ದು, ವ್ಯಾಕ್ಸಿನ್ ಡಿಪ್ಲೋಮಸಿಯಲ್ಲಿ ತೊಡಗಿಸಿಕೊಂಡಿದೆ.
100 ದೇಶಗಳಿಗೆ 750 ದಶಲಕ್ಷ ಡೋಸ್ ಲಸಿಕೆಗಳನ್ನು ಒದಗಿಸಿರುವ ಚೀನಾ ತನ್ನ ಕೋವಿಡ್ ಲಸಿಕೆಗಳಾದ ಸಿನೋಫಾರ್ಮ್ ಮತ್ತು ಸಿನೋವ್ಯಾಕ್ ಅನ್ನು 'ಜಾಗತಿಕ ಸಾರ್ವಜನಿಕ ಹಿತಾಸಕ್ತಿ' ಎಂದು ಬಿಂಬಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಮುಂದುವರೆಸುತ್ತಿದೆ.
ಚೀನಾ ಸರ್ಕಾರದ ಪ್ರಕಾರ, 190 ಮಿಲಿಯನ್ ಡೋಸ್‌ಗಳನ್ನು ಆಸಿಯಾನ್ ಸದಸ್ಯ ರಾಷ್ಟ್ರಗಳಿಗೆ ರವಾನಿಸಲಾಗಿದೆ. ಇದರಲ್ಲಿ ಹತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಬ್ರೂನೈ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಂಗಳು ಸೇರಿವೆ. ಈ ಕುರಿತು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.