ಇಸ್ಲಮಾಬಾದ್:ದೇಶದ ಜನಸಂಖ್ಯೆಯಲ್ಲಿ 25 ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಹೀಗಾಗಿ ಪಾಕಿಸ್ತಾನದಲ್ಲಿ ಲಾಕ್‌ಡೌನ್ ಘೋಷಣೆ ಸಾಧ್ಯವಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಹಲವು ದೇಶಗಳು ಲಾಕ್‌ಡೌನ್ ಘೋಷಣೆ ಮಾಡಿವೆ. ಆದರೆ ಪಾಕಿಸ್ತಾನದಲ್ಲಿ ಲಾಕ್‌ಡೌನ್ ಘೋಷಣೆ ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಸಂಪೂರ್ಣ ಲಾಕ್‌ಡೌನ್ ಎಂದರೆ ರಾಜ್ಯ ಮತ್ತು ಸೇನೆಯಿಂದ ಆಡಳಿತ ನಡೆಸುವ ಕರ್ಫ್ಯೂ ಹೇರುವುದು. ಜನರು ಮನೆಯೊಳಗೆ ಇರಲು ಒತ್ತಾಯಿಸುವುದು. ನಮ್ಮ ದೇಶದ ಶೇಕಡಾ 25 ರಷ್ಟು ಜನಸಂಖ್ಯೆಯು ಬಡತನ ರೇಖೆಗಿಂತ ಕೆಳಗಿದೆ ಮತ್ತು ದಿನಗೂಲಿಯಿಂದ ಜನ ಬದುಕು ಸಾಗಿಸುತ್ತಿದ್ದಾರೆ. ನಮ್ಮ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಕಚೇರಿ ಟ್ವಿಟರ್‌ನಲ್ಲಿ ತಿಳಿಸಿದೆ.
ನಮ್ಮ ಹಿರಿಯರಿಗೆ ನಾವು ಜವಾಬ್ದಾರರಾಗಿರಬೇಕು. ನಮ್ಮನ್ನು ಮತ್ತು ಎಲ್ಲರನ್ನೂ ಸುರಕ್ಷಿತವಾಗಿಡಲು ಸಾಮಾಜಿಕ ಅಂತರ, ಸ್ವಯಂ-ಪ್ರತ್ಯೇಕತೆ ಮತ್ತು ಸ್ವಯಂ-ಸಂಪರ್ಕತಡೆಯನ್ನು ಅಭ್ಯಾಸ ಮಾಡಿಕೊಳ್ಳ ಬೇಕಾಗಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಜನರ ಕಷ್ಟಗಳನ್ನು ಸರಾಗಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.