ಲಾಸ್ ಏಂಜಲೀಸ್ (ಅಮೆರಿಕ): ಇಲ್ಲಿನ ಎಲ್ಎ ಕೌಂಟಿ ನಿವಾಸಿಗಳು ವ್ಯಾಕ್ಸಿನೇಷನ್ ಹಾಕಿಕೊಂಡಿದ್ದರೂ, ಹಾಕಿಸಿಕೊಳ್ಳದಿದ್ದರೂ ಒಳಾಂಗಣ ಹಾಗೂ ಹೊರಾಂಗಣದಲ್ಲೂ ಮಾಸ್ಕ್ ಧರಿಸಬೇಕು ಎಂದು ಆರೋಗ್ಯಾಧಿಕಾರಿಗಳ ಆದೇಶ ಹೊರಡಿಸಿದ್ದಾರೆ.
ಅಂದಾಜು 1 ಕೋಟಿ 10 ಲಕ್ಷ ಜನಸಂಖ್ಯೆಯಿರುವ ಈ ಪ್ರದೇಶದಲ್ಲಿ ಏಕಾಏಕಿ ಕೋವಿಡ್ ಪ್ರಕರಣ ಹಾಗೂ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಹಿನ್ನೆಲೆ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಡೆಲ್ಟಾ ರೂಪಾಂತರವು ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕೌಂಟಿ ಮೇಲ್ವಿಚಾರಕ ಹಿಲ್ಡಾ ಸೊಲಿಸ್, ಮಾಸ್ಕ್ ಧರಿಸಿ ಅಂತಾ ಹೇಳುವುದಕ್ಕೆ ನಮಗೂ ಇಷ್ಟವಿಲ್ಲ. ಆದರೆ, ಜನರ ಜೀವ ಉಳಿಸುವುದು ನಮಗೆ ಬಹಳ ಮುಖ್ಯ ಎಂದಿದ್ದಾರೆ.
ಲಸಿಕೆ ಪಡೆದಿದ್ದರೂ, ಪಡೆಯದಿದ್ದರೂ ಕಚೇರಿಗಳ ಒಳಗೆ ಮತ್ತು ಹೊರಗೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದ ಆರೋಗ್ಯಾಧಿಕಾರಿಗಳು ಕಳೆದ ವಾರವಷ್ಟೇ ಆದೇಶ ಹೊರಡಿಸಿದ್ದರು.
ಸ್ಯಾನ್ ಫ್ರಾನ್ಸಿಸ್ಕೊ, ಸಾಂತಾ ಕ್ಲಾರಾ, ಸ್ಯಾನ್ ಮಾಟಿಯೊ, ಮರಿನ್, ಅಲ್ಮೇಡಾ, ಕಾಂಟ್ರಾ ಕೋಸ್ಟಾ ಮತ್ತು ಸೋನೊಮಾ ಸೇರಿ ಕೆಲ ಪ್ರದೇಶಗಳಲ್ಲಿ ಲಸಿಕೆ ಪಡೆದಿರುವವರು ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಬಕ್ರಿದ್ ಹಬ್ಬಕ್ಕೆ ಲಾಕ್ಡೌನ್ ಸಡಿಲಿಕೆ ಬೇಡ: ಕೇರಳ ಸರ್ಕಾರಕ್ಕೆ ಐಎಂಎ ಎಚ್ಚರಿಕೆ
ಎಲ್ಎ ಕೌಂಟಿಯಲ್ಲಿ ಶನಿವಾರ 525 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ. ಏಪ್ರಿಲ್ 14 ರಿಂದ ಈಚೆಗೆ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಸಮಸ್ಯೆಗಳು ಗಂಭೀರವಾಗಿ ಉಲ್ಭಣವಾಗುತ್ತಿರುವುದರಿಂದ ಆಸ್ಪತ್ರೆಗಳೂ ತುಂಬಿ ತುಳುಕುತ್ತಿವೆ. ಹಾಗಾಗಿ ಮುನ್ನೆಚ್ಚರಿಕೆ ಕೈಗೊಳ್ಳಬೇಕಿರುವುದು ಅನಿವಾರ್ಯ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕಿ ಬಾರ್ಬರಾ ಫೆರರ್ ಹೇಳಿದ್ದಾರೆ.