ಬ್ರೌನ್ ಡೀರ್, ಅಮೆರಿಕ:ವ್ಯಕ್ತಿಯೋರ್ವ ಇಬ್ಬರ ಮೇಲೆ ಗುಂಡು ಹಾರಿಸಿ ಕೊಂದು, ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಸ್ಕಾಸಿನ್ ರಾಜ್ಯದ ಮಿಲ್ವಾಕಿಯ ನಗರ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹದಿಂದ ವ್ಯಕ್ತಿ ಗುಂಡು ಹಾರಿಸಿರಬಹುದು ಎಂದು ಬ್ರೌನ್ ಡೀರ್ ಪ್ರದೇಶದ ಪೊಲೀಸ್ ಅಧಿಕಾರಿ ಪೀಟರ್ ನಿಮ್ಮರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಫೋನ್ನಲ್ಲಿ ಬ್ಯುಸಿ, ದೆಹಲಿ ಮೆಟ್ರೋ ಟ್ರ್ಯಾಕ್ ಮೇಲೆ ಬಿದ್ದ ವ್ಯಕ್ತಿ.. ಮುಂದೇನಾಯ್ತು!?
31 ವರ್ಷದ ಪುರುಷ ಮತ್ತು 23 ವರ್ಷದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗುಂಡು ಹಾರಿಸಿಕೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೊಬ್ಬ 36 ವರ್ಷದ ವ್ಯಕ್ತಿಯ ಕಾಲಿಗೆ ಗುಂಡು ತಗುಲಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ವೇಳೆಯಲ್ಲಿ ಸ್ಥಳಕ್ಕೆ ಧಾವಿಸಿದ್ದ ಪೊಲೀಸರ ಮೇಲೆಯೂ ವ್ಯಕ್ತಿ ಗುಂಡು ಹಾರಿಸಿದ್ದನು ಎಂದು ತಿಳಿದುಬಂದಿದ್ದು, ತನಿಖೆ ಮುಂದುವರೆಯುತ್ತಿದೆ.