ವಾಷಿಂಗ್ಟನ್:ವಿಶ್ವ ಬ್ಯಾಂಕ್ನ ಮಾಜಿ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ತೆರವಾದ ಸ್ಥಾನಕ್ಕೆ ಆರ್ಥಿಕ ತಜ್ಞ/ 2016ರ ಟ್ರಂಪ್ ಚುನಾವಣೆ ಅಭಿಯಾನದ ಸಲಹೆಗಾರ ಆಗಿದ್ದ ಡೇವಿಡ್ ಮಾಲ್ಪಾಸ್ ಅವರು ನೇಮಕವಾಗಿದ್ದಾರೆ.
ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಡೇವಿಡ್ ಮಾಲ್ಪಾಸ್ ಅವರನ್ನು ಜಗತ್ತಿನ ಅತಿದೊಡ್ಡ ವಿಶ್ವ ಬ್ಯಾಂಕಿನ 13ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.
ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿಯು ಅವಿರೋಧವಾಗಿ ಮಾಲ್ಪಾಸ್ ಹೆಸರನ್ನು ಅನುಮೋದಿಸಿದ್ದು, ಏಪ್ರಿಲ್ 9ರಿಂದ ಬ್ಯಾಂಕ್ನ ವ್ಯವಹಾರಗಳನ್ನು ಕೈಗೆತಿಕೊಳ್ಳಲಿದ್ದಾರೆ. ವಿಶ್ವ ಬ್ಯಾಂಕ್ ಅನ್ನು ಕಳೆದ 73 ವರ್ಷಗಳಿಂದ ಅತಿಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ಇರಿಸಿ ಅಮೆರಿಕ ಮುನ್ನಡಿಸಿಕೊಂಡು ಬರುತ್ತಿದೆ.
ಅಧ್ಯಕ್ಷರಾಗಿ ನೇಮಕದ ಘೋಷಣೆ ಹೊರ ಬೀಳುತ್ತಿದ್ದಂತೆ ಸುದ್ದಿ ಸಂಸ್ಥೆಯೊಂದಕ್ಕೆ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಮಾಲ್ಪಾಸ್, ಬಡ ರಾಷ್ಟ್ರಗಳಲ್ಲಿನ ಬಡತನ ನಿಯಂತ್ರಣ ಹಾಗೂ ಹವಾಮಾನ ವೈಪರೀತ್ಯವನ್ನು ಸರಿದಾರಿಗೆ ತರಲು ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಹವಾಮಾನ ಬದಲಾವಣೆಗೆ 13 ಶತಕೋಟಿ ಡಾಲರ್ ಮೀಸಲಿಡಬೇಕು ಎಂಬ ಈ ಹಿಂದಿನ ಹೇಳಿಕೆಗೆ ಈಗಲೂ ತಾವು ಬದ್ಧ ಎಂದು ಅವರು ಹೇಳಿದ್ದಾರೆ.
ವಿಶ್ವ ಬ್ಯಾಂಕ್ ಉದ್ಯೋಗಿಗಳು ತೀವ್ರ ಗತಿಯಲ್ಲಿ ಸಾಗುತ್ತಿರುವ ಬಡತನದ ವಿರುದ್ಧ ಹೋರಾಡುವ ಅಗತ್ಯವಿದೆ. ಪ್ರತಿಯೊಬ್ಬ ಸಾಲಗಾರರು ವಿಶಾಲವಾದ ದೃಷ್ಟಿಕೋನವನ್ನ ಬೆಳೆಸಿಕೊಳ್ಳಬೇಕು. ಎಲ್ಲರನ್ನು ಒಳಗೊಳ್ಳುವ ಹಾಗೂ ಸ್ಥಿರವಾದ ಜಾಗತಿಕ ಆರ್ಥಿಕತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ ಎಂದು ಸಲಹೆ ನೀಡಿದ್ದಾರೆ.
ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾದ ಚೀನಾದೊಂದಿಗೆ ನಾನು ಗಟ್ಟಿಯಾದ ಸ್ನೇಹ ಸಂಬಂಧ ನಿರೀಕ್ಷಿಸುತ್ತಿದ್ದೇನೆ. ವಿಕಾಸವನ್ನು ಮುಂದಿಟ್ಟುಕೊಂಡು ಬಡತನ ನಿಯಂತ್ರಣ ಹಾಗೂ ನಿವಾರಣೆ ಮಿಷನ್ಗೆ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮಾಲ್ಪಾಸ್ ಇದೇ ವೇಳೆ ಕೋರಿಕೊಂಡಿದ್ದಾರೆ.