ಚಾಮರಾಜನಗರ: ಕೋವಿಡ್ ಲಾಕ್ಡೌನ್ ಇದ್ದರೂ ಮುಜರಾಯಿ ದೇಗುಲವನ್ನು ತೆರೆಸಿ, ಬಿಜೆಪಿ ಮುಖಂಡರೊಬ್ಬರು ತಮ್ಮ ಮಗನ ಮದುವೆ ಮಾಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಸಮೀಪವಿರುವ ಪಾರ್ವತಿ ಬೆಟ್ಟದಲ್ಲಿ ನಡೆದಿದೆ.
ಹೇಳೋರಿಲ್ಲ - ಕೇಳೋರಿಲ್ಲ.. ಗುಂಡ್ಲುಪೇಟೆಯ ಪಾರ್ವತಿ ಬೆಟ್ಟದಲ್ಲಿ ಬಿಜೆಪಿ ಮುಖಂಡನ ಮಗನ ಮದುವೆ..! - chamaraanagara latest news
ಲಾಕ್ಡೌನ್ ಇದ್ದರೂ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ, ಗುಂಡ್ಲುಪೇಟೆ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲೇಶ್ ಅವರು ದೇವಸ್ಥಾನದ ಬಾಗಿಲು ತೆರೆಸಿ ತಮ್ಮ ಮಗನ ವಿವಾಹ ಕಾರ್ಯ ನೆರವೇರಿಸಿದ್ದು, ಈ ಲಾಕ್ಡೌನ್ ನಿಯಮ ಕೇವಲ ಬಡಜನರಿಗೆ ಮಾತ್ರ ಅನ್ವಯವೇ ಎಂಬ ಪ್ರಶ್ನೆ ಇಲ್ಲಿನ ಸ್ಥಳೀಯರಲ್ಲಿ ಕಾಡುತ್ತಿದೆ.
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ, ಗುಂಡ್ಲುಪೇಟೆ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲೇಶ್ ಅವರು ತಮ್ಮ ಪುತ್ರನ ಮದುವೆಯನ್ನು ಇಂದು ಮುಜರಾಯಿ ಇಲಾಖೆಗೆ ಒಳಪಡುವ ದೇಗುಲದಲ್ಲಿ ಪಾರ್ವತಿ ಬೆಟ್ಟದಲ್ಲಿ ನಡೆಸಿದ್ದು, ವಿವಾಹ ಸಮಾರಂಭಕ್ಕೆ ಪುರಸಭಾ ಅಧ್ಯಕ್ಷ ಗಿರೀಶ್ ಕೂಡ ಭಾಗಿಯಾಗಿದ್ದಾರೆ.
ಲಾಕ್ಡೌನ್ ಹೇರಿ ಎಲ್ಲಾ ದೇಗುಲಗಳಿಗೂ ರಾಜ್ಯ ಸರ್ಕಾರ ಬೀಗ ಹಾಕಿದೆ. ಆದರೆ, ಗುಂಡ್ಲುಪೇಟೆಯಲ್ಲಿ ಹೇಳೋರು - ಕೇಳೋರು ಯಾರು ಇಲ್ಲವೆಂಬಂತೆ ದೇಗುಲ ತೆಗೆಸಿ ವಿವಾಹವನ್ನೇ ನಡೆಸಿದ್ದಾರೆ. ಲಾಕ್ಡೌನ್ ಹೊತ್ತಿನಲ್ಲಿ ಬೈಕ್ ಸವಾರಿ ಮಾಡಿದರೇ ಕೇಸ್ ಹಾಕುವ ಪೊಲೀಸರು ಇಲ್ಲಿ ಮಾತ್ರ ಗಪ್ ಚುಪ್ ಆಗಿದ್ದಾರೆ. ತಾಲೂಕು ಆಡಳಿತವೂ ಜಾಣ ಕುರುಡು ಪ್ರದರ್ಶನ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.