ಕರ್ನಾಟಕ

karnataka

ETV Bharat / entertainment

ಬಂಗಾಳದಲ್ಲಿ ಬ್ಯಾನ್, ಯುಪಿಯಲ್ಲಿ ರತ್ನಗಂಬಳಿ: 4 ದಿನಕ್ಕೆ ₹45 ಕೋಟಿ ಬಾಚಿದ 'ದಿ ಕೇರಳ ಸ್ಟೋರಿ'

ಉತ್ತರ ಪ್ರದೇಶ ಸರ್ಕಾರ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಿದೆ.

kerala story
'ದಿ ಕೇರಳ ಸ್ಟೋರಿ'

By

Published : May 9, 2023, 11:11 AM IST

ವಿವಾದಗಳ ನಡುವೆ ಶುಕ್ರವಾರ ತೆರೆ ಕಂಡಿರುವ 'ದಿ ಕೇರಳ ಸ್ಟೋರಿ' ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿದೆ. ವಿವಾದ, ಪ್ರತಿಭಟನೆ, ಆಕ್ರೋಶಗಳನ್ನು ಎದುರಿಸಿ ದೇಶದಾದ್ಯಂತ ಬಿಡುಗಡೆಯಾಗಿದೆ. ಕೆಲವು ರಾಜ್ಯಗಳು ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದರೂ ಸಹ ಹಲವೆಡೆ ಚಿತ್ರಮಂದಿರಗಳು ಹೌಸ್​ ಫುಲ್​ ಆಗಿವೆ. ಇದೀಗ ಉತ್ತರ ಪ್ರದೇಶ ಸರ್ಕಾರವು 'ದಿ ಕೇರಳ ಸ್ಟೋರಿ' ಸಿನಿಮಾವನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಿದೆ. ಇದನ್ನು ಖುದ್ದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮಂಗಳವಾರ ಘೋಷಿಸಿದ್ದಾರೆ.

"ಉತ್ತರ ಪ್ರದೇಶದಲ್ಲಿ 'ದಿ ಕೇರಳ ಸ್ಟೋರಿ'ಯನ್ನು ತೆರಿಗೆ ಮುಕ್ತಗೊಳಿಸಲಾಗುವುದು" ಎಂದು ಸಿಎಂ ಯೋಗಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಯೋಗಿ ಆದಿತ್ಯನಾಥ್​ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಲೋಕಭವನದಲ್ಲಿ ಆಯೋಜಿಸಲಾಗಿರುವ ವಿಶೇಷ ಪ್ರದರ್ಶನದಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ವೀಕ್ಷಿಸಲಿದ್ದಾರೆ ಎಂದು ಸಿಎಂ ಕಚೇರಿಯ ಅಧಿಕೃತ ಖಾತೆ ಟ್ವೀಟ್​ನಲ್ಲಿ ತಿಳಿಸಿದೆ. ಮಧ್ಯಪ್ರದೇಶವು ಈಗಾಗಲೇ ಮೇ 6 ರಿಂದ ರಾಜ್ಯದಲ್ಲಿ 'ದಿ ಕೇರಳ ಸ್ಟೋರಿ'ಯನ್ನು ತೆರಿಗೆ ಮುಕ್ತಗೊಳಿಸಿದೆ.

'ದಿ ಕೇರಳ ಸ್ಟೋರಿ' ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯ ಪಿತೂರಿಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಈ ಸಿನಿಮಾವನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. "ಸಿನಿಮಾದಲ್ಲಿ ಹೆಣ್ಣು ಮಕ್ಕಳು ಕ್ಷಣಿಕ ಭಾವುಕತೆಗೆ ಸಿಲುಕಿ ಹೇಗೆ ಲವ್ ಜಿಹಾದ್‌ನ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ?, ಅವರನ್ನು ಯಾವ ರೀತಿ ನಾಶ ಮಾಡಲು ಪ್ರಯತ್ನಿಸುತ್ತಾರೆ ಎಂಬುದನ್ನು ಚಿತ್ರ ಹೇಳುತ್ತದೆ”ಎಂದು ಮುಖ್ಯಮಂತ್ರಿ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಹೇಳಿದ್ದಾರೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಪ್ರದರ್ಶನ ಕಾಣದಂತೆ ನಿಷೇಧ ಹೇರಲಾಗಿದೆ. "ಬಂಗಾಳದಲ್ಲಿ ಶಾಂತಿ ಕಾಪಾಡಲು ಮತ್ತು ದ್ವೇಷದ ಕಿಚ್ಚು ಹರಡದಂತೆ ಹಾಗೂ ಹಿಂಸಾಚಾರದ ಯಾವುದೇ ಘಟನೆ ನಡೆಯದಂತೆ ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಸಿಎಂ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಮೇ 7 ರಿಂದ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ.

ಏತನ್ಮಧ್ಯೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಂಪುಟ ಸಹದ್ಯೋಗಿಗಳು ಮತ್ತು ಕುಟುಂಬದವರ ಜೊತೆ ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ. "ನಾವೆಲ್ಲರೂ ಮೇ 11 ರಂದು ಸಿನಿಮಾ ವೀಕ್ಷಿಸಲು ಹೋಗುತ್ತೇವೆ. ನಾನು ಚಲನಚಿತ್ರವನ್ನು ಪ್ರಚಾರ ಮಾಡಲು ಹೋಗುವುದಿಲ್ಲ. ನಾನು ಕುಳಿತು ನೋಡುತ್ತೇನೆ" ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕಳೆದ ಭಾನುವಾರ ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ದಿ ಕೇರಳ ಸ್ಟೋರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವೀಕ್ಷಿಸಿದ್ದಾರೆ. "ಈ ಚಲನಚಿತ್ರವು ಶಸ್ತ್ರಾಸ್ತ್ರಗಳಿಲ್ಲದ ಹೊಸ ರೀತಿಯ ವಿಷಕಾರಿ ಭಯೋತ್ಪಾದನೆಯನ್ನು ತೋರಿಸುತ್ತದೆ" ಎಂದು ನಡ್ಡಾ ಹೇಳಿದ್ದಾರೆ.

ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು?:'ದಿ ಕೇರಳ ಸ್ಟೋರಿ' ಚಿತ್ರವು ಭಾರಿ ಪ್ರತಿಭಟನೆಗಳ ನಡುವೆ ಬಿಡುಗಡೆಯಾದರೂ ಮೊದಲ ದಿನವೇ 8.03 ಕೋಟಿ ರೂ ಗಳಿಸಿದೆ. 40 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ನಂತರದ 3 ದಿನವೂ ಉತ್ತಮ ಗಳಿಕೆ ಕಂಡಿದೆ. ಬಿಡುಗಡೆಯಾದ ನಾಲ್ಕನೇ ದಿನದಂದು ಎರಡಂಕಿಯನ್ನು ತಲುಪಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ. ಸೋಮವಾರದಂದು ದಿ ಕೇರಳ ಸ್ಟೋರಿ 10.51 ಕೋಟಿ ಗಳಿಸಿದೆ. ಹೀಗಾಗಿ ಕೇರಳ ಸ್ಟೋರಿಯ ಒಟ್ಟು ಕಲೆಕ್ಷನ್ ಸುಮಾರು 45.75 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲೂ 'ದಿ ಕೇರಳ ಸ್ಟೋರಿ' ಪ್ರದರ್ಶನ ರದ್ದು: ಶಾಂತಿ ಕಾಪಾಡಲು ಈ ನಿರ್ಧಾರ ಎಂದ ಸಿಎಂ

ABOUT THE AUTHOR

...view details