ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಸಾವಿನ ಪ್ರಕರಣದ ಆರೋಪಿಗಳಾದ ಸಮರ್ ಸಿಂಗ್ ಮತ್ತು ಸಂಜಯ್ ಸಿಂಗ್ ಇಬ್ಬರನ್ನು ಬಂಧಿಸಲಾಗಿದ್ದು, ವಾರಾಣಸಿಯ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಏಪ್ರಿಲ್ 13ರಿಂದ 5 ದಿನಗಳವರೆಗೆ ಸಮರ್ ಸಿಂಗ್ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆದರೆ, ಸಂಜಯ್ ಸಿಂಗ್ ಅವರು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಏಪ್ರಿಲ್ 13 ರಂದು ಬೆಳಗ್ಗೆ 10 ಗಂಟೆಯಿಂದ ಸಮರ್ ಸಿಂಗ್ ಅವರನ್ನು ತನಿಖೆ ನಡೆಸಲು ನ್ಯಾಯಾಲಯವು ಆದೇಶಿಸಿತ್ತು. ಆದರೆ ಈ ವಿಷಯವಾಗಿ ನಿರ್ಲಕ್ಷ್ಯತನ ತೋರಿದ ಪೊಲೀಸರು ಸಂಜೆ 4 ಗಂಟೆಯಿಂದ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಆಕಾಂಕ್ಷಾ ದುಬೆ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ. ಪೊಲೀಸರಿಗೆ ಸಮರ್ ಸಿಂಗ್ ಸಂಪೂರ್ಣ ಸಹಕಾರ ನೀಡಿದ್ದು, ಬಹುತೇಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಆದರೆ, ಅವರು ಪ್ರತಿ ಬಾರಿಯೂ ತಾನು ನಿರಪರಾಧಿ ಮತ್ತು ಆಕಾಂಕ್ಷಾ ಸಾವಿನ ಹಿಂದೆ ನನ್ನ ಕೈವಾಡವಿಲ್ಲ ಎಂದು ಹೇಳಿದ್ದಾರೆ. "ಅವರು ಒಂದು ವೇಳೆ ನನ್ನಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲಿ ನನ್ನ ಹೆಸರನ್ನು ಡೆತ್ ನೋಟಲ್ಲಿ ಉಲ್ಲೇಖಿಸುತ್ತಿದ್ದರು. ನನ್ನ ಮೇಲೆಯೇ ಆರೋಪ ಮಾಡುತ್ತಿದ್ದರು. ಅಲ್ಲದೇ ಅವರು ನನ್ನ ವಿಷಯವಾಗಿ ಸಾಯುವಂತಹ ಘಟನೆ ನಮ್ಮಿಬ್ಬರ ನಡುವೆ ನಡೆದೇ ಇಲ್ಲ. ಅವರ ಸಾವಿನ ಹಿಂದೆ ಬೇರೆ ಯಾವುದೋ ಕಾರಣವಿದೆ, ಹೊರತಾಗಿ ನಾನಲ್ಲ" ಎಂದು ಹೇಳಿದ್ದಾರೆ.
ಆಕಾಂಕ್ಷಾ ದುಬೆ ಮತ್ತು ಸಮರ್ ಸಿಂಗ್ ನಡುವಿನ ಸಂಬಂಧದ ಕೆಲವು ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ. ಇದಕ್ಕೆ, "ಇಬ್ಬರು ಜೊತೆಯಾಗಿ 26 ಕ್ಕೂ ಹೆಚ್ಚು ಆಲ್ಬಮ್ ಸಾಂಗ್ಗಳನ್ನು ಮಾಡಿದ್ದೇವೆ. ನಮ್ಮಿಬ್ಬರ ಸಂಬಂಧ ಚೆನ್ನಾಗಿಯೇ ಇತ್ತು. ನಾವು ಎಲ್ಲ ವಿಷಯಗಳನ್ನು ಪರಸ್ಪರ ಶೇರ್ ಮಾಡಿಕೊಳ್ಳುತ್ತಿದ್ದೆವು" ಎಂದು ತಿಳಿಸಿದ್ದಾರೆ. ಅಲ್ಲದೇ ಆಕಾಂಕ್ಷಾ ಜೊತೆಗಿನ ಹಣಕಾಸು ವ್ಯವಹಾರದ ಬಗ್ಗೆಯೂ ಮಾತನಾಡಿದ್ದಾರೆ. ಅವರು ಯಾವುದೇ ಹಣವನ್ನು ಆಕಾಂಕ್ಷಾಗೆ ನೀಡಿಲ್ಲ ಮತ್ತು ತಮ್ಮ ವಿರುದ್ಧ ಹೊರಿಸಲಾದ ಆರೋಪಗಳು ತಪ್ಪು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.