ಹೈದರಾಬಾದ್ (ತೆಲಂಗಾಣ): ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಹಾಡು ವಿಶೇಷ ಕ್ರೇಜ್ ಹುಟ್ಟು ಹಾಕಿದೆ. ಜೊತೆಗೆ, ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆಗೆ ನಾಮಿನೇಟ್ ಕೂಡಾ ಆಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಹೀಂದ್ರಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ನಟ ರಾಮ್ ಚರಣ್ರೊಂದಿಗೆ ಹೆಜ್ಜೆ ಹಾಕಿದ ವಿಡಿಯೋ ಕ್ಲಿಪ್ವೊಂದನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಟೊಮೊಬೈಲ್ ಉದ್ಯಮಿ ಆನಂದ್ ಮಹೀಂದ್ರಾ ಅವರು ಹೈದರಾಬಾದ್ನ ಇ-ಪ್ರಿಕ್ಸ್ನಲ್ಲಿ ನಡೆದ ಭಾರತದ ಮೊದಲ ಫಾರ್ಮುಲಾ ಇ-ರೇಸ್‌ನಲ್ಲಿ ಭಾಗವಹಿಸಿದ ವೇಳೆ ಆರ್‌ಆರ್‌ಆರ್ ನಟ ರಾಮ್ ಚರಣ್ ಅವರೊಂದಿಗೆ ಕಾಣಿಸಿಕೊಂಡಿರುವ ಸಣ್ಣ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಮ್ಚರಣ್ ಅವರು ಆನಂದ್ ಮಹೀಂದ್ರಾಗೆ ನಾಟು ನಾಟು ಡ್ಯಾನ್ಸ್ನ ಹುಕ್ಸ್ಪೆಪ್ಸ್ ಹೇಳಿಕೊಡುವುದನ್ನು ಕಾಣಬಹುದು. ಈ ವೇಳೆ ರಾಮ್ಚರಣ್ ಬರಿಗಾಲಿನಲ್ಲಿದ್ದರು. ಇಬ್ಬರು ತಬ್ಬಿಕೊಂಡು ಸಮಾರಂಭದಲ್ಲಿ ಇತರ ಗಣ್ಯರೊಂದಿಗೆ ಮಾತು ಮುಂದುವರೆಸುತ್ತಿದ್ದರು.
ಇದನ್ನೂ ಓದಿ:RRR ಬಗ್ಗೆ ಸ್ಪೀಲ್‌ಬರ್ಗ್ ಗುಣಗಾನ: ಕುರ್ಚಿಯಿಂದ ಎದ್ದು ಕುಣಿಯುವಷ್ಟು ಸಂತೋಷಪಟ್ಟ ರಾಜಮೌಳಿ
ಈ ಕುರಿತು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ, "ನನ್ನ ಸ್ನೇಹಿತ ರಾಮ್ ಚರಣ್ ಅವರಿಂದ ನಾಟು ನಾಟು ಸ್ಟೆಪ್ಸ್ ಕಲಿತುಕೊಂಡೆ. ಧನ್ಯವಾದಗಳು ಮತ್ತು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದಕ್ಕೆ ಶುಭಾಶಯಗಳು, ಶುಭವಾಗಲಿ' ಎಂದಿದ್ದಾರೆ.
ಆನಂದ್ ಮಹೀಂದ್ರಾ ಟ್ವೀಟ್ಗೆ ಉತ್ತರಿಸಿದ ರಾಮ್ ಚರಣ್, "ಆನಂದ ಮಹೀಂದ್ರಾ ಜೀ ನೀವು ನನಗಿಂತ ವೇಗವಾಗಿ ಸ್ಟೆಪ್ಸ್ಗಳನ್ನು ಕಲಿತುಕೊಂಡಿರಿ. ನಿಮ್ಮೊಂದಿಗೆ ನಡೆಸಿದ ಸಂವಾದ ಚೆನ್ನಾಗಿತ್ತು. RRR ಚಿತ್ರತಂಡಕ್ಕೆ ಶುಭಾಶಯ ತಿಳಿಸಿದಕ್ಕೆ ಧನ್ಯವಾದಗಳು" ಎಂದಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದಾಗಿನಿಂದ ಈವರೆಗೆ 4,15,000 ಕ್ಕೂ ಹೆಚ್ಚು ಮಂದಿ ವೀಕ್ಷಣೆ ಪಡೆದಿದ್ದು, 36,000ಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡಿದೆ.
ಇದನ್ನೂ ಓದಿ:ಹೈದರಾಬಾದ್ನಲ್ಲಿಂದು ಕಾರುಗಳ ರೊಯ್ ರೊಯ್ ಸದ್ದು, ಫಾರ್ಮುಲಾ-ಇ ಚಾಂಪಿಯನ್‌ಶಿಪ್ ಸ್ಪರ್ಧೆ
ಫಾರ್ಮುಲಾ ಇ-ರೇಸಿಂಗ್ ವಿಶ್ವ ಚಾಂಪಿಯನ್‌ಶಿಪ್: ಹುಸೇನ್ ಸಾಗರದ ಎನ್‌ಟಿಆರ್ ರಸ್ತೆ ಮಾರ್ಗದಲ್ಲಿ ನಡೆದ ಫಾರ್ಮುಲಾ-ಇ ವಿಶ್ವ ಚಾಂಪಿಯನ್ಶಿಪ್ನಲ್ಲಿ 11 ತಂಡಗಳು ಭಾಗವಹಿಸಿದ್ದವು. ವಿಶೇಷ ಅಂದ್ರೆ ಭಾರತದಲ್ಲಿ ನಡೆಯುತ್ತಿರುವ ಮೊದಲ ಫಾರ್ಮುಲಾ ಒನ್ ರೇಸ್ ಇದಾಗಿದ್ದು, ಸ್ಪರ್ಧೆಯನ್ನು ವೀಕ್ಷಿಸಲು ಕ್ರಿಕೆಟ್, ಸಿನಿಮಾ ತಾರೆಯರು ಹಾಗೂ ದೇಶ, ವಿದೇಶಗಳ ಗಣ್ಯರು ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ಸ್ಪರ್ಧೆಯಾದ ಕಾರಣ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.