ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ವಿಕಲಚೇತನ ವ್ಯಕ್ತಿಯೊಬ್ಬರು ಹಣ ಕೇಳಿದರೂ ಕಾರು ನಿಲ್ಲಿಸದೇ ಹೋದ ನಟಿಯು ಟ್ರೋಲ್ಗೆ ಗುರಿಯಾಗಿದ್ದರು. ಆದರೆ ಈ ಘಟನೆಗೆ ಸಂಬಂಧಿಸಿದ ಪೋಸ್ಟ್ವೊಂದನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ತಮಗೆ ತೀವ್ರ ಆಘಾತ ಉಂಟು ಮಾಡಿದ ಎರಡು ವಿಷಯಗಳ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಪ್ರೀತಿ ಜಿಂಟಾ ಅವರ ಈ ಪೋಸ್ಟ್ಗೆ ಪ್ರಿಯಾಂಕಾ ಚೋಪ್ರಾ, ಹೃತಿಕ್ ರೋಷನ್, ಅರ್ಜುನ್ ರಾಂಪಾಲ್ ಮತ್ತು ಮಲೈಕಾ ಅರೋರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.
ಪ್ರೀತಿ ಜಿಂಟಾ ಬರೆದುಕೊಂಡಿದ್ದೇನು?: "ನಾನು ಇತ್ತೀಚೆಗೆ ಪಾರ್ಕ್ಗೆ ದೊಡ್ಡ ಮಗಳು ಗಿಯಾಳನ್ನು ಕರೆದೊಯ್ದಿದ್ದೆ. ಅಲ್ಲಿ ಮಹಿಳೆಯೊಬ್ಬರು ಗಿಯಾ ಜೊತೆ ಫೋಟೋ ತೆಗೆಸಿಕೊಳ್ಳುವುದಾಗಿ ಹೇಳಿದರು. ಆದರೆ ನಾನು ಅದಕ್ಕೆ ಒಪ್ಪಿಗೆ ನೀಡಿಲ್ಲ. ಬಳಿಕ ಸುಮ್ಮನಾದ ಮಹಿಳೆ ಕೊಂಚ ಹೊತ್ತಿನ ಬಳಿಕ ಬಲವಂತವಾಗಿ ಗಿಯಾಳ ತುಟಿಯ ಬಳಿ ಮುತ್ತಿಟ್ಟು ಓಡಿ ಹೋದಳು. ಇದು ನನಗೆ ನಿಜಕ್ಕೂ ಆಘಾತ ತಂದಿತು. ಮಗಳಿಗೆ ಮುತ್ತಿಟ್ಟು ಓಡಿಹೋದ ಮಹಿಳೆ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ನಾನು ಸೆಲೆಬ್ರಿಟಿ ಆಗದೇ ಇರುತ್ತಿದ್ದರೆ ಅಲ್ಲಿ ಬೇರೆಯದೇ ಘಟನೆ ನಡೆಯುತ್ತಿತ್ತು. ಆದರೆ ಸೀನ್ ಕ್ರಿಯೇಟ್ ಮಾಡಲು ನನಗೆ ಇಷ್ಟವಿರಲಿಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ:'ಶಾಂತಿ ಮತ್ತು ನೆಮ್ಮದಿ ಅನುಭವಿಸಿದೆ': ಕಾಮಾಖ್ಯ ದೇವಿಯ ದರ್ಶನ ಪಡೆದ ಪ್ರೀತಿ ಜಿಂಟಾ
ಮುಂದುವರೆದು, "ಏರ್ಪೋರ್ಟ್ಗೆ ಹೋಗಲು ಸಜ್ಜಾಗಿದ್ದ ನಾನು ಕಾರು ಹತ್ತಲು ಬಂದಾಗ ವಿಕಲಚೇತನ ವ್ಯಕ್ತಿಯೊಬ್ಬರು ನನ್ನಲ್ಲಿ ಹಣ ಕೇಳಿದ್ದಾನೆ. ಈ ಹಿಂದೆ ಹಲವು ಬಾರಿ ಆ ವ್ಯಕ್ತಿ ನನ್ನನ್ನು ಹಣ ಕೇಳಿದ್ದ. ಸಾಕಷ್ಟು ಬಾರಿ ಕೊಟ್ಟಿದ್ದೇನೆ ಕೂಡ. ಆದರೆ ಈ ಬಾರಿ ಆತ ಹಣ ಕೇಳಿದಾಗ ನನ್ನ ಬಳಿ ನಗದು ಇಲ್ಲ, ಕಾರ್ಡ್ ಮಾತ್ರವೇ ಇದೆ ಎಂದು ಹೇಳಿ ಹೊರಟುಬಿಟ್ಟೆ. ಆದರೆ ಆ ವಿಕಲಚೇತನ ವ್ಯಕ್ತಿ ನನ್ನ ಕಾರನ್ನು ಹಿಂಬಾಲಿಸುತ್ತಾ ಬಂದ. ನಾನು ಅವನಿಗೆ ಹಣ ಕೊಡದೇ ಇದ್ದಿದ್ದಕ್ಕೆ ಬೈಯಲು ಆರಂಭಿಸಿದ. ಬಳಿಕ ಕಾರಿನಲ್ಲಿ ನನ್ನ ಜೊತೆಗಿದ್ದ ಮಹಿಳೆ ಅವನಿಗೆ ತಮ್ಮ ಪರ್ಸ್ನಲ್ಲಿದ್ದ ಸ್ವಲ್ಪ ಹಣವನ್ನು ತೆಗೆದುಕೊಟ್ಟರು. ಆದರೆ ಆ ಹಣವನ್ನು ಅವನು ಎಸೆದುಬಿಟ್ಟ. ಇಷ್ಟು ಹಣ ಸಾಕಾಗುವುದಿಲ್ಲ, ಇನ್ನಷ್ಟು ಕೊಡುವಂತೆ ಪೀಡಿಸಲು ಆರಂಭಿಸಿದ. ಆದರೆ ಇದನ್ನೆಲ್ಲಾ ನೋಡುತ್ತಿದ್ದ ಪಾಪರಾಜಿಗಳು ನಗುತ್ತಿದ್ದರು. ಯಾರೂ ಕೂಡ ಸಹಾಯಕ್ಕೆ ಬರಲಿಲ್ಲ. ಆ ವಿಕಲಚೇತನ ವ್ಯಕ್ತಿಗೆ ಬುದ್ಧಿವಾದವನ್ನು ಸಹ ಹೇಳಿಲ್ಲ" ಎಂದು ಬರೆದುಕೊಂಡಿದ್ದಾರೆ.
ಇವರು ಪೋಸ್ಟ್ ಅಪ್ಲೋಡ್ ಮಾಡುತ್ತಿದ್ದಂತೆ ನೆಟ್ಟಿಗರು ಕಮೆಂಟ್ಗಳ ಸುರಿಮಳೆಗೈದಿದ್ದಾರೆ. ಪ್ರೀತಿ ಜಿಂಟಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದವರು ಕ್ಷಮೆಯಾಚಿಸಿದ್ದಾರೆ. ಜೊತೆಗೆ ಬಾಲಿವುಡ್ ಸೆಲೆಬ್ರಿಟಿಗಳು ನಟಿಯನ್ನು ಶ್ಲಾಘಿಸಿದ್ದು, ಅವರ ಪರವಾಗಿ ಮಾತನಾಡಿದ್ದಾರೆ. ಹೃತಿಕ್ ರೋಷನ್ ಕೆಂಪು ಹೃದಯದ ಎಮೋಜಿನೊಂದಿಗೆ ಪ್ರತಿಕ್ರಿಯಿಸಿದ್ದಾರೆ. 'ಮುಂದಿನ ಬಾರಿ ಹೀಗಾದರೆ ನನಗೆ ಕರೆ ಮಾಡಿ' ಎಂದು ಅರ್ಜುನ್ ರಾಂಪಾಲ್ ಹೇಳಿದ್ದಾರೆ. 'ನೀವು ಇದನ್ನು ಸ್ಪಷ್ಟವಾಗಿ ಹೇಳಿದ್ದೀರಿ' ಎಂದು ಮಲೈಕಾ ಅರೋರಾ ಬರೆದಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಶ್ಲಾಘಿಸುವ ಎಮೋಜಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಹೆರಿಗೆ ಆಸ್ಪತ್ರೆ ಮುಂದೆ ಕಾಣಿಸಿಕೊಂಡ ದಂಪತಿ.. ತಂದೆಯಾಗಲಿದ್ದಾರಾ ನಟ ವರುಣ್ ಧವನ್?