ಸಂದೇಶ ಸಾರುವಂತಹ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಬಹುಕಾಲದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಕನ್ನಡ ಚಿತ್ರರಂಗದ ಮೇಷ್ಟ್ರು ಎಂದೇ ಜನಪ್ರಿಯ. ಇದೀಗ ಇವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ವಿಷಯವೊಂದಕ್ಕೆ ಚರ್ಚೆಗೀಡಾಗಿದೆ. ರಾಷ್ಟ್ರೀಯ ಸ್ವಯಂ ಸ್ವೇವಕ ಸಂಘದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮವೇ ಇದಕ್ಕೆ ಕಾರಣ.
ವೈರಲ್ ಆದ ಆಮಂತ್ರಣ ಪತ್ರಿಕೆಯಲ್ಲೇನಿದೆ?ಇದೇ ಜುಲೈ 16, ಭಾನುವಾರದಂಂದು ಬೆಂಗಳೂರಿನಲ್ಲಿ ಆರ್ಎಸ್ಎಸ್ನ ಕಾರ್ಯಕ್ರಮವೊಂದು ಆಯೋಜನೆಗೊಂಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಂಕರಪುರ ಭಾಗ ಶ್ರೀ ಗುರುಪೂಜಾ ಉತ್ಸವ ಹಮ್ಮಿಕೊಂಡಿದೆ. ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯ ಶ್ರೀ ನಿಜಗುಣ ಕಲ್ಯಾಣ ಮಂಟಪದಲ್ಲಿ ಜು. 16ರ ಬೆಳಿಗ್ಗೆ 10 ಗಂಟೆಗೆ ಈ ಕಾರ್ಯಕ್ರಮ ಆರಂಭವಾಗಲಿದೆ. ಈ ಅಂಶಗಳನ್ನೊಳಗೊಂಡ ಆಮಂತ್ರಣ ಪತ್ರಿಕೆಯಲ್ಲಿ ಅಧ್ಯಕ್ಷರ ಹೆಸರಿರುವ ಜಾಗದಲ್ಲಿ ಶ್ರೀ ನಾಗತಿಹಳ್ಳಿ ಚಂದ್ರಶೇಖರ್, ಖ್ಯಾತ ಸಿನಿಮಾ ನಿರ್ದೇಶಕರು ಹಾಗೂ ಬರಹಗಾರರು ಎಂದು ಬರೆಯಲಾಗಿದೆ. ವಕ್ತಾರರ ಜಾಗದದಲ್ಲಿ ಶ್ರೀ ಗುರುರಾಜ್, ಅಖಿಲ ಭಾರತ ಸಂಯೋಜಕರು, ಗ್ರಾಮ ವಿಕಾಸ ಎಂದು ಬರೆದಿದೆ.
ಪರ - ವಿರೋಧ ಚರ್ಚೆ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರಾಷ್ಟ್ರೀಯ ಸ್ವಯಂ ಸ್ವೇವಕ ಸಂಘದಿಂದ ನಡೆಯುತ್ತಿರುವ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ, ಅಧ್ಯಕ್ಷತೆ ವಹಿಸಲಿದ್ದಾರೆ ಎಂಬ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ. ಹೀಗಾಗಿ ಸ್ವತಃ ನಾಗತಿಹಳ್ಳಿ ಚಂದ್ರಶೇಖರ್ ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.