ಸಂದೇಶ ಸಾರುವ ಜೊತೆಗೆ ಸಿನಿ ಪ್ರೇಮಿಗಳಿಗೆ ಇಷ್ಟ ಆಗುವಂತಹ ಚಿತ್ರಗಳನ್ನು ನಿರ್ದೇಶನ ಮಾಡಿ ಯಶಸ್ಸು ಕಂಡ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಕೆಲ ದಿನಗಳ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿರೋ ಸಿನಿಮಾಗಳು ಶ್ರೀಲಂಕಾದ ಕನ್ನಡ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಅಂತಾ ಹೇಳಲಾಗಿತ್ತು. ಅದೇ ರೀತಿ ಶ್ರೀಲಂಕಾದ ಫಿಲ್ಮ್ ಕಾರ್ಪೋರೇಶನ್, ಅಲ್ಲಿನ ಪ್ರವಾಸೋದ್ಯಮ ಇಲಾಖೆ, ಏಷ್ಯನ್ ಮೀಡಿಯಂ ಕಲ್ಚರಲ್ ಅಸೋಸಿಯೇಶನ್ ಸಹಯೋಗದಲ್ಲಿ ಏಪ್ರಿಲ್ 27ರಿಂದ ಮೇ 4ರ ವರೆಗೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ ಸಿನಿಮಾಗಳನ್ನು ಪ್ರದರ್ಶಿಸಿದೆ.
ಶ್ರೀಲಂಕಾದಲ್ಲಿ ನಡೆದ ಕನ್ನಡ ಚಲನಚಿತ್ರ ಉತ್ಸವಕ್ಕೆ ಅಲ್ಲಿನ ವಾರ್ತಾ ಮತ್ತು ಸಾರಿಗೆ ಸಚಿವರಾದ ಡಾ. ಬಂದುಲ ಗುಣವರ್ಧನೆ ಚಾಲನೆ ನೀಡಿ, ಕನ್ನಡ ಸಿನಿಮಾಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಏಷ್ಯಾ ಮಾಧ್ಯಮ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಉಪುಲ್ ಜಯಸಿಂಘೆ, ಶ್ರೀಲಂಕಾ ಚಲನಚಿತ್ರ ಮಂಡಳಿಯ ಅಧ್ಯಕ್ಷ ದೀಪಲ್ ಚಂದ್ರರತ್ನೆ, ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ ನಿರ್ದೇಶಕರಾದ ಪ್ರೊ ಅಂಕುರನ್ ದತ್ತ, ಪತ್ರಕರ್ತರಾದ ಜಿ.ಎನ್ ಮೋಹನ್, ಹೆಚ್.ಬಿ ಮದನಗೌಡ ಭಾಗವಹಿಸಿದ್ದರು.
ನಿರ್ದೇಶಕ ಹಾಗೂ ಬರಹಗಾರ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕ ಅಮೆರಿಕ, ಮಾತಾಡ್ ಮಾತಾಡ್ ಮಲ್ಲಿಗೆ, ಕೋಟ್ರೇಶಿ ಕನಸು, ಇಷ್ಟಕಾಮ್ಯ ಚಿತ್ರಗಳು ಅಲ್ಲಿ ಪ್ರದರ್ಶನ ಮಾಡಲಾಗಿದೆ. ಹಾಗೇ ಸಿನಿಮಾ ಕಥೆ, ನಿರೂಪಣೆ, ಚಿತ್ರಕಥೆ ರಚನೆ, ಛಾಯಾಗ್ರಹಣ, ಸಂಕಲನ ಮುಂತಾದ ವಿಷಯಗಳ ಬಗ್ಗೆ ಶ್ರೀಲಂಕಾದ ಸಿನಿಮಾಸಕ್ತ ವಿದ್ಯಾರ್ಥಿಗಳೊಂದಿಗೆ ನಾಗತಿಹಳ್ಳಿ ಚಂದ್ರಶೇಖರ್ ಸಂವಾದ ನಡೆಸಿದ್ದಾರೆ. ಅಷ್ಟೇ ಅಲ್ಲ ಶ್ರೀಲಂಕಾದ ಸಿನಿ ಪ್ರೇಮಿಗಳು ಕನ್ನಡ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.