ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತೊಮ್ಮೆ ಪ್ರಸಿದ್ಧ ನಿರ್ದೇಶಕ ಜೋಶಿ ಅವರೊಂದಿಗೆ ಜೊತೆಯಾಗುತ್ತಿದ್ದಾರೆ. ಆ್ಯಕ್ಷನ್ ಪ್ಯಾಕ್ಡ್ ಸಿನಿಮಾದ ಹೆಸರು ರಾಂಬಾನ್ (Rambaan). ನಟ ಚೆಂಬನ್ ವಿನೋದ್ ಜೋಸ್ ಬರೆದಿರುವ ಈ ಚಿತ್ರ ಕೊಚ್ಚಿಯಲ್ಲಿ ಅಧಿಕೃತವಾಗಿ ಘೋಷಣೆ ಆಗಿದೆ. ಸಿನಿಮಾ ಲಾಂಚ್ ಈವೆಂಟ್‌ನಲ್ಲಿ, ನಿರ್ಮಾಪಕರು ಚಿತ್ರದ ಮೋಷನ್ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ಪ್ರೇಕ್ಷಕರಿಗೆ ಈ ಸಿನಿಮಾದಲ್ಲಿ ಏನೆಲ್ಲಾ ಸಿಗಲಿದೆ ಎಂಬುದರ ಒಂದು ನೋಟವನ್ನು ಮೋಷನ್ ಪೋಸ್ಟರ್ ಮೂಲಕ ಬಹಿರಂಗಪಡಿಸಿದ್ದಾರೆ.
ರಾಂಬಾನ್ ಮೋಷನ್ ಪೋಸ್ಟರ್:ಇಂದು ಅನಾವರಣಗೊಂಡಿರುವ ಮೋಷನ್ ಪೋಸ್ಟರ್ನಲ್ಲಿ ನಟ ಮೋಹನ್ ಲಾಲ್ (ಅನಿಮೇಟೆಡ್) ವಿಂಟೇಜ್ ಕಾರಿನ ಮೇಲೆ ನಿಂತಿದ್ದಾರೆ. ಸುತ್ತಿಗೆ, ಗನ್ ಎರಡನ್ನೂ ಹಿಡಿದಿದ್ದು, ರಾಂಬಾನ್ ಒಂದು ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಎಂದು ಮೋಷನ್ ಪೋಸ್ಟರ್ ಸೂಚಿಸಿದೆ. ಮೋಷನ್ ಪೋಸ್ಟರ್‌ನಲ್ಲಿರುವ ಹಿನ್ನೆಲೆ ಚಿತ್ರಣವು ಗ್ರಾಮೀಣ ಮತ್ತು ನಗರ ಸೆಟ್ಟಿಂಗ್‌ಗಳ ನಡುವಿನ ವ್ಯತ್ಯಾಸವನ್ನು ಸಹ ಎತ್ತಿ ಹಿಡಿದಿದೆ. ಒಂದು ಕಡೆ, ಹುಲ್ಲುಹಾಸಿನ ಗ್ರಾಮೀಣ ಪ್ರದೇಶವನ್ನು ಚಿತ್ರಿಸಲಾಗಿದೆ. ಇನ್ನೊಂದು ಕಡೆ ಎತ್ತರದ ಕಟ್ಟಡಗಳೊಂದಿಗೆ ನಗರದ ಚಿತ್ರಣವನ್ನು ಪ್ರದರ್ಶಿಸುತ್ತದೆ. ಪೋಸ್ಟರ್‌ನ ಕೇಂದ್ರ ಭಾಗ ವಾಹನಗಳಿಂದ ತುಂಬಿದ ಹೆದ್ದಾರಿಯನ್ನು ಹೊಂದಿದೆ. ಡಾರ್ಕ್ ಕಲರ್ ರಾಂಬಾನ್ ಮೋಷನ್ ಪೋಸ್ಟರ್ ಅನ್ನು ಪವರ್ಫುಲ್ ಆಗಿ ತೋರಿಸಿದೆ.
ಅಭಿಮಾನಿಗಳ ಬೆಂಬಲ ಕೇಳಿದ ಮೋಹನ್ ಲಾಲ್:ಸೂಪರ್ ಸ್ಟಾರ್ ಮೋಹನ್ ಲಾಲ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಮೋಷನ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ, "ಜೋಶಿ ಸರ್ ನಿರ್ದೇಶನದ ಮತ್ತು ಚೆಂಬನ್ ವಿನೋದ್ ಜೋಸ್, ಐನ್‌ಸ್ಟಿನ್ ಝಾಕ್ ಪೌಲ್ ಮತ್ತು ಶೈಲೇಶ್ ಆರ್ ಸಿಂಗ್ ನಿರ್ಮಾಣದ ನನ್ನ ಮುಂಬರುವ ಚಿತ್ರ ರಾಂಬಾನ್ ಮೋಷನ್ ಪೋಸ್ಟರ್ ಅನ್ನು ಅನಾವರಣಗೊಳಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ. ನಿಮ್ಮ ಬೆಂಬಲ ಇರಲಿ" ಎಂದು ಬರೆದುಕೊಂಡಿದ್ದಾರೆ.