ಹೊಸ ವರ್ಷಾರಂಭದಲ್ಲಿ ತೆರೆಕಾಣಲು ಸಜ್ಜಾಗಿರೋ ರೆಟ್ರೋ ಸಿನಿಮಾ ''ರಂಗಸಮುದ್ರ''. ಪೋಸ್ಟರ್, ಹಾಡುಗಳಿಂದ ಪ್ರೇಕ್ಷಕರ ಮನಕದ್ದಿರುವ ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರ ಸಾಥ್ ಸಿಕ್ಕಿದೆ. ಹೌದು, ಭಾರತೀಯ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ಮ್ಯೂಸಿಕ್ ಡೈರೆಕ್ಟರ್, ಪದ್ಮಶ್ರೀ, ರಾಷ್ಟ್ರ ಪ್ರಶಸ್ತಿ ಹಾಗೂ ವಿಶ್ವದ ಅತ್ಯಂತ ಪ್ರಮುಖ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಎಮ್.ಎಮ್ ಕೀರವಾಣಿ ಅವರು 'ರಂಗಸಮುದ್ರ' ಚಿತ್ರದ ಹಾಡಿಗೆ ದನಿ ನೀಡಿದ್ದಾರೆ. ಬಾಹುಬಲಿ, ಆರ್ಆರ್ಆರ್ ಚಿತ್ರಗಳ ಸಂಗೀತ ಮಾಂತ್ರಿಕ ಕೀರವಾಣಿ ಅವರಿಂದ ಚಿತ್ರದ ಅದ್ಭುತ ಗೀತೆಯೊಂದನ್ನು ಹಾಡಿಸಿ, ಅದನ್ನು ಚಿತ್ರತಂಡ ಬಿಡುಗಡೆಗೆಗೊಳಿಸಿದೆ.
ಎಮ್.ಎಮ್ ಕೀರವಾಣಿಯವರು ದಶಕಗಳ ನಂತರ "ರಂಗಸಮುದ್ರ" ಚಿತ್ರದ ಮೂಲಕ ಕನ್ನಡಕ್ಕೆ ಮರಳಿ ಗೀತೆಯೊಂದಕ್ಕೆ ದನಿಯಾಗಿರುವುದು ಚಿತ್ರತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದಂತಾಗಿದೆ. ಅರ್ಥಾತ್ ಬಾಹುಬಲಿ ಸಂಗೀತ ಮಾಂತ್ರಿಕನ ಬಲ ಸಿಕ್ಕಾಂತಾಗಿದೆ ಎನ್ನುವುದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತು.
ರಂಗಸಮುದ್ರ ಚಿತ್ರದ ನಿರ್ದೇಶಕ ರಾಜ್ ಕುಮಾರ್ ಅಸ್ಕಿ , ಸಾಹಿತಿ ವಾಗೀಶ್ ಚನ್ನಗಿರಿ ಹಾಗೂ ಸಂಗೀತ ನಿರ್ದೇಶಕ ದೇಸಿ ಮೋಹನ್ ಅವರು ಈ ಒಂದು ಗೀತೆಗೆ ಎಮ್ ಎಮ್ ಕೀರವಾಣಿಯವರೇ ದನಿಯಾಗಬೇಕು ಎಂದು ಚಿತ್ರದ ನಿರ್ಮಾಪಕ ಹೊಯ್ಸಳ ಕೊಣನೂರು ಅವರ ಬಳಿ ಹೇಳಿಕೊಂಡಿದ್ದರು. ಚಿತ್ರತಂಡದ ಆಸೆಯಂತೆ ನಿರ್ಮಾಪಕರು ಕೀರವಾಣಿ ಅವರನ್ನು ಸಂಪರ್ಕಿಸಿದಾಗ, ಸಂಗೀತ ನಿರ್ದೇಶಕರು ಚಿತ್ರತಂಡವನ್ನು ಪ್ರೀತಿಯಿಂದ ಹೈದಾರಬಾದ್ಗೆ ಆಹ್ವಾನಿಸಿದ್ದರು.
ಕೀರವಾಣಿ ಅವರು ಸಾಂಗ್ ಅನ್ನು ಒಮ್ಮೆ ಕೇಳಿದ ನಂತರ, ನಾನು ಸೀನಿಯರ್ ಎಂಬುದನ್ನು ಬದಿಗಿಟ್ಟು, ಚಿತ್ರದ ಕಥೆ ಹೇಳಿ ಎಂದು ನಗುತ್ತಲೇ ಡೈರೆಕ್ಟರ್ಗೆ ಹೇಳಿದ್ದಾರೆ. ಕೀರವಾಣಿಯವರು ಕಥೆ ಕೇಳಿದ 5 ನಿಮಿಷಕ್ಕೆ ಹಾಡನ್ನು ಹಾಡಲು ಒಪ್ಪಿದರು ಎನ್ನುತ್ತಾರೆ ನಿರ್ದೇಶಕ ರಾಜ್ ಕುಮಾರ್ ಅಸ್ಕಿ. ಇನ್ನೂ ಹಾಡಲು ಸಿದ್ಧರಾಗುವಾಗ ಗೀತೆಯನ್ನು ಕನ್ನಡದಲ್ಲೇ ಬರೆದುಕೊಂಡು, ಬಹಳ ಸುಮಧುರವಾಗಿ ಹಾಡಿ ಕನ್ನಡ ಭಾಷೆ ಮೇಲಿರುವ ಅಭಿಮಾನವನ್ನು ಸಾಬೀತುಪಡಿಸಿರುವುದು ಹೆಮ್ಮೆಯ ಸಂಗತಿ.
ಸರಿಸುಮಾರು ಅರ್ಧ ದಿನ ಚಿತ್ರತಂಡದೊಂದಿಗೆ ಗುಣಮಟ್ಟದ ಸಮಯ ಕಳೆದಿದ್ದಾರೆ. ಕನ್ನಡದ ನಂಟು, ಬೆಂಗಳೂರಿನಲ್ಲಿ ಒಂದು ಚಿಕ್ಕ ರೂಮಿನಲ್ಲಿ ವಾಸ ಮಾಡುತ್ತಿದ್ದದ್ದು, ಚಾಮುಂಡೇಶ್ವರಿ ಸ್ಟುಡಿಯೋ ಇಂದ ತನ್ನ ಸಿನಿಪಯಣ ಶುರುವಾಗಿದ್ದು, ತಮ್ಮ ಆಪ್ತ ಸ್ನೇಹಿತ ದೊಡ್ಡಣ್ಣ ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.